ಚಾಮರಾಜನಗರ: ಜಿಲ್ಲಾ ಉಸ್ತುವಾರಿ ಸಚಿವರಾದ ಬಳಿಕ ವಿ.ಸೋಮಣ್ಣ ಅವರು ಬುಧವಾರ ಅಧಿಕಾರಿಗಳೊಂದಿಗೆ ನಗರದ ಜಿಲ್ಲಾ ಪಂಚಾಯತ್ ಸಭಾಂಗಣದಲ್ಲಿ ಮೊದಲ ಸಭೆಯನ್ನು ನಡೆಸಿದರು. ಈ ಸಭೆಯಲ್ಲಿ ಎಲ್ಲಾ ಇಲಾಖೆಯ ಮುಖ್ಯಾಧಿಕಾರಿಗಳು, ನಗರಸಭೆ ಆಯುಕ್ತರಿಗೆ ಬೆಂಡೆತ್ತಿ, ಚಾಟಿ ಬೀಸಿದರು.
ಎಲ್ಲರೂ ಮೊದಲು ತಮ್ಮ-ತಮ್ಮನ್ನು ಪರಿಚಯಿಸಿಕೊಳ್ಳಿ ಎಂದು ಸಚಿವ ಸೋಮಣ್ಣ ಸೂಚಿಸುತ್ತಿದ್ದಂತೆ, ಅಧಿಕಾರಿಗಳು ಎದ್ದು ನಿಂತು ತಮ್ಮ ಹೆಸರು, ಇಲಾಖೆ ಬಗ್ಗೆ ಹೇಳುತ್ತಿದ್ದಂತೆ ನೀನಿನ್ನು ಚುರುಕಾಗಬೇಕು. ನಿನ್ನ ಕೆಲಸ ಸಾಲಲ್ಲ, ಇನ್ನೂ ಇಂಪ್ರೂವ್ ಆಗಬೇಕು ಎಂದು ಮೇಷ್ಟ್ರ ರೀತಿ ಪಾಠ ಮಾಡಿದರು.
ಅಧಿಕಾರಿಗಳು ಪರಿಚಯಿಸಿಕೊಳ್ಳುವ ವೇಳೆ ಎಲ್ಲಿ ವಾಸ್ತವ್ಯ ಮಾಡುತ್ತೀದ್ದೀರಾ ಎಂಬ ಪ್ರಶ್ನೆ ಕೇಳುತ್ತಿದ್ದ ಸಚಿವರು, ಮೈಸೂರಿನಲ್ಲಿ ಉಳಿದುಕೊಂಡಿದ್ದೇನೆ, ಇಲ್ಲೂ ಮನೆ ಮಾಡಿದ್ದೇನೆ ಎಂದು ಕೆಲ ಅಧಿಕಾರಿಗಳು ಉತ್ತರಿಸುತ್ತಿದ್ದಂತೆ ಮಿನಿಸ್ಟರ್ ಗರಂ ಆದ್ರು. ನೀವು ಕೆಲ್ಸ ಮಾಡುವುದು ಇಲ್ಲಿ- ಉಳಿಯುವುದು ಮಾತ್ರ ಅಲ್ಲಾ, ಇದ್ರೆ ಇಲ್ಲಿರಿ, ಇಲ್ಲಾಂದ್ರೆ ಬೇರೆ ಜಿಲ್ಲೆಗೆ ಹೋಗಿ, ಬಲವಂತ ಮಾಡಲ್ಲ. ನಿಮಗೇನಾದರೂ ಸಮಸ್ಯೆ ಇದ್ದರೆ ಪರಿಹರಿಸುತ್ತೇವೆ. ಜಿಲ್ಲಾ ಮಟ್ಟದ ಅಧಿಕಾರಿಗಳು ಜಿಲ್ಲೆಯಲ್ಲೇ ಉಳಿಯಬೇಕು. ಮುಂದಿನ ತಿಂಗಳು 4 ರ ಒಳಗೇ ಇಲ್ಲಿ ಮನೆ ಮಾಡಬೇಕು ಎಂದು ತಾಕೀತು ಮಾಡಿದರು.
ಮಹಿಳಾ ಅಧಿಕಾರಿಗಳಿಗೂ ಬೆವರಿಳಿಸಿದ ಸೋಮಣ್ಣ: ಮಗನಿಗೆ ಆರೋಗ್ಯ ತೊಂದರೆಯಾಗುತ್ತಿರುವ ಹಿನ್ನೆಲೆ ಮೈಸೂರಿನಲ್ಲಿ ಇರುವುದಾಗಿ ಹೇಳಿದ ಕೃಷಿ ಜೆಡಿ ಚಂದ್ರಕಲಾ ಅವರನ್ನೂ ತರಾಟೆಗೆ ತೆಗೆದುಕೊಂಡ ಸಚಿವರು, "ನೋಡಮ್ಮ, ಬೇಕಾದ್ರೆ ನನ್ನ ಮೈಸೂರಿನ ಮನೆಯನ್ನೇ ತಗೊ, ಮಗನ ಆರೋಗ್ಯ ಸಮಸ್ಯೆ ಬಗ್ಗೆ ಪರಿಹಾರ ಮಾಡುತ್ತೇನೆ. ಆದ್ರೆ ವಾರದಲ್ಲಿ ನಾಲ್ಕು ದಿನವಾದರೂ ಜಿಲ್ಲಾ ಕೇಂದ್ರದಲ್ಲೇ ಇರಬೇಕಮ್ಮ" ಎಂದು ಸೂಚಿಸಿದರು.
ಡಿಡಿಎಲ್ ಆರ್ ಮಾತನಾಡಿ, ತನ್ನ ಪತಿ ಮೈಸೂರಿನಲ್ಲಿ ಪ್ರಾಧ್ಯಾಪಕರಾಗಿರುವ ಹಿನ್ನೆಲೆ ಮೈಸೂರಿನಲ್ಲೇ ವಾಸ್ತವ್ಯ ಮಾಡುತ್ತಿರುವುದಾಗಿ ಹೇಳಿದ್ದಕ್ಕೆ ಗರಂ ಆದ ಸೋಮಣ್ಣ, "ನೋಡಮ್ಮ, ನಿಮ್ಮದು ಜವಾಬ್ದಾರಿ ಹುದ್ದೆ, ನೀ ಇಲ್ಲೇ ಉಳಿದುಕೊಂಡರೇ, ನಿಮ್ಮ ಯಜಮಾನ್ರೆ ನಿನ್ನನ್ನು ಹುಡುಕಿಕೊಂಡು ಇಲ್ಲಿಗೆ ಬರುತ್ತಾರೆ., ನೀ ಇಲ್ಲೇ ಇರಮ್ಮ. ನಿಮ್ಮ ಯಜಮಾನರ ನಂಬರ್ ಕೊಡು ನಾನು ಮಾತನಾಡಿ ಹೇಳುತ್ತೇನೆ. ನಿಮ್ಮ ಮಕ್ಕಳನ್ನು ಬೇಕಾದರೆ ನನಗೆ ದತ್ತು ಕೊಡಮ್ಮ, ಮನೆಯಲ್ಲಿ ನಾನು ನನ್ನ ಹೆಂಡತಿ ಇಬ್ರೇ ಇರೋದು ಚೆನ್ನಾಗಿ ಸಾಕ್ತೀವಿ, ನೀ ಇಲ್ಲೇ ಇರಬೇಕು ಎಂದು ಸೂಚಿಸಿದರು.
ಇದನ್ನೂ ಓದಿ: ನಾವು ಕಾಂಗ್ರೆಸ್ಗೆ ಹೋಗಲ್ಲ, ನಾವ್ಯಾರೂ ಅವರ ಸಂಪರ್ಕದಲ್ಲಿಲ್ಲ : ಸಚಿವ ಕೆ ಸಿ ನಾರಾಯಣಗೌಡ
ಲೋಕಪಯೋಗಿ ಇಲಾಖೆ ಎಂಜಿನಿಯರ್ ಕೂಡ ಮೈಸೂರಿನಲ್ಲೇ ವಾಸ್ತವ್ಯ ಮಾಡುತ್ತಿರುವುದು ತಿಳಿದು ಗರಂ ಆದ ಸಚಿವರು, ಮೈಸೂರಲ್ಲಿ ಕೆಲಸಕ್ಕಿದ್ದಾಗ ಸಣ್ಣವಾಗಿದ್ದೆ, ಈಗ ದಪ್ಪ ಆಗಿದೀಯಾ, ತಾಳಿಭಾಗ್ಯದಿಂದ ಏನಾದರೂ ಕೆಲಸ ತಗೊಂಡ ಎಂದು ಹಾಸ್ಯ ಚಟಾಕಿ ಹಾರಿಸಿದರು.
ಒಟ್ಟಿನಲ್ಲಿ ಇಂದಿನ ಸಭೆಯಲ್ಲಿ ಎಲ್ಲಾ ಇಲಾಖಾ ಅಧಿಕಾರಿಗಳನ್ನು ಬೆಂಡೆತ್ತಿದ್ದ ಸಚಿವರು, ಅಸಡ್ಡೆ ಬಿಟ್ಟು ಕೆಲಸ ಮಾಡಿ. ಎಡವಟ್ಟು ಮಾಡುವುದೇನಾದರೂ ಗೊತ್ತಾದರೇ ಅಮಾನತು ಮಾಡಲ್ಲ, ಇನ್ನೊಂದು ಮಾಡ್ತೀನಿ. ಮುಖ ನೋಡಿದ ಕೂಡಲೇ ಹೇಳಿ ಬಿಡ್ತೀನಿ ನಿಮ್ಮ ಕೆಲ್ಸ ಹೇಗೆ ಎಂದು. ಚುರುಕಾಗಿ ಕೆಲಸ ಮಾಡಿ, ಬಡವರ ಅಭಿವೃದ್ಧಿ ಮಾಡಿ ಎಂದು ಖಡಕ್ ವಾರ್ನಿಂಗ್ ಕೊಟ್ಟರು.
ಡಿಸಿ, ಸಿಇಒಗೆ ಬೆಂಡೆತ್ತಿದ್ದ ಮಿನಿಸ್ಟರ್: ಡಿಸಿ ಚಾರುಲತಾ ಸೋಮಲ್, ಜಿ.ಪಂ. ಸಿಇಒ ಗಾಯತ್ರಿ ಹಾಗೂ ಎಸ್ಪಿ ದಿವ್ಯಾ ಸಾರಾ ಥಾಮಸ್ ಅನುಪಸ್ಥಿತಿಯಲ್ಲೂ ಮೂವರು ಮಹಿಳಾ ಅಧಿಕಾರಿಗಳಿಗೆ ಚಾಟಿ ಬೀಸಿದ ಸಚಿವರು, ಜನಸಾಮಾನ್ಯರು ಕರೆ ಮಾಡಿದರೇ ಸ್ವೀಕರಿಸಿ ಮಾತನಾಡುವುದನ್ನು ನೀವು ಕಲಿಯಬೇಕು. ಒಬ್ಬರ ಕರೆಯನ್ನೂ ನೀವು ಸ್ವೀಕರಿಸುತ್ತಿಲ್ಲ ಎಂಬ ದೂರುಗಳಿವೆ. ಈ ವರ್ತನೆ ಸರಿಯಿಲ್ಲ. ಜನಸಾಮಾನ್ಯರಿಗೆ ಸ್ಪಂದಿಸಿ ಎಂದು ಅಧಿಕಾರಿಗಳ ನಡೆಗೆ ಉಸ್ತುವಾರಿ ಸಚಿವರು ಕಿಡಿಕಾರಿದ್ರು.
ಜಾಹೀರಾತು : ನಿಮ್ಮ ಸೂಕ್ತ ಸಂಗಾತಿ ಹುಡುಕುತ್ತಿರುವಿರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ ನೋಂದಣಿ ಉಚಿತ
ತಾಳಿಭಾಗ್ಯ ಕೊಡಲು ಹೋಗಿದ್ದ ರೇವಣ್ಣ: ಸಭೆಯ ನಡುವೆ ಎಂಜಿನಿಯರ್ ಜೊತೆ ಮಾತನಾಡುವಾಗ ಎಚ್.ಡಿ. ರೇವಣ್ಣ ಅವರ ಬಗ್ಗೆ ಪ್ರಸ್ತಾಪಿಸಿದ ಸಚಿವರು, ಹಾಸನದ ಬಹಳ ಬುದ್ಧಿವಂತ ಎಂಜಿನಿಯರ್ ಒಬ್ಬನಿಗೆ ತಾಳಿಭಾಗ್ಯದ ಮೂಲಕ ನೌಕರಿ ಕೊಡಲು ರೇವಣ್ಣ ಮುಂದಾಗಿದ್ದರು. ಆದರೆ, ಅದಕ್ಕೆ ಒಲ್ಲೆ ಎಂದ ಆತ ಕಷ್ಟಪಟ್ಟು ಓದಿಯೇ ಉದ್ಯೋಗ ಪಡೆದ ಎಂಬ ಪ್ರಸಂಗವನ್ನು ಹೇಳಿ ಹಾಸನದ ಬಹುತೇಕ ಎಂಜಿನಿಯರ್ಗಳು ಸರ್ಕಾರಿ ಉದ್ಯೋಗ ಹಿಡಿದಿದ್ದಾರೆ, ದೇಶದಲ್ಲೆಲ್ಲಾ ಇದ್ದಾರೆ ಎಂದು ಹೇಳಿದರು.