ಚಾಮರಾಜನಗರ: ಕೊರೊನಾ ಮಹಾಮಾರಿಗೆ ತಂದೆ-ತಾಯಿಯನ್ನು ಕಳೆದುಕೊಂಡಿದ್ದ ಚಾಮರಾಜನಗರ ತಾಲೂಕಿನ ಕೊತ್ತಲವಾಡಿ ಗ್ರಾಮದ 4 ವರ್ಷದ ಬಾಲಕಿಯನ್ನು ಇಂದು ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ ಸಚಿವೆ ಶಶಿಕಲಾ ಜೊಲ್ಲೆ ಭೇಟಿ ಮಾಡಿ ಧೈರ್ಯ ತುಂಬಿದರು.
ಮನೆಗೆ ಭೇಟಿ ನೀಡಿದ ಸಚಿವರು, ಬಾಲಕಿಯನ್ನು ಮಡಿಲಲ್ಲಿ ಕೂರಿಸಿಕೊಂಡು "ಚೆನ್ನಾಗಿ ಓದಬೇಕು, ಮುಂದೆ ಏನಾಗಬೇಕೆಂದುಕೊಂಡಿರುವೆ ಎಂದು ಕೇಳಿದರು." ಇದಕ್ಕೆ ಬಾಲಕಿ, "ಕಲೆಕ್ಟರ್ ಆಗುತ್ತೇನೆ" ಎಂದು ಉತ್ತರಿಸಿದ್ದಕ್ಕೆ, "ಆಗಲೇ ಬೇಕು ನೀನು, ನಿನ್ನ ವಿದ್ಯಾಭ್ಯಾಸಕ್ಕೆ ಯಾವುದೇ ತೊಂದರೆ ಆಗದಂತೆ ಕ್ರಮ ತೆಗೆದುಕೊಳ್ಳಲಾಗುವುದು, ಸರ್ಕಾರದಿಂದ ಪ್ರತಿ ತಿಂಗಳು ಹಣ, SSLC ಆದ ಬಳಿಕ ಲ್ಯಾಪ್ ಟಾಪ್, 21 ವರ್ಷಗಳಾದ ಬಳಿಕ 1 ಲಕ್ಷ ರೂ. ಹಣವನ್ನು ಸರ್ಕಾರ ಕೊಡಲಿದೆ" ಎಂದು ಬಾಲಕಿ ಹಾಗೂ ಆಕೆಯನ್ನು ದತ್ತು ಪಡೆದು ಸಾಕುತ್ತಿರುವ ಚಿಕ್ಕಪ್ಪ-ಚಿಕ್ಕಮ್ಮನಿಗೆ ಧೈರ್ಯ ತುಂಬಿದರು.
ತುರ್ತು ಸಹಾಯ ಏನಾದರೂ ಬೇಕಿದ್ದರೆ ಮುಡಾ ಅಧ್ಯಕ್ಷ ರಾಜೀವ್ ಅವರನ್ನಾಗಲಿ, ನನ್ನಾಗಲಿ ಸಂಪರ್ಕಿಸಿ, ಯಾವುದಕ್ಕೂ ಧೈರ್ಯಗೆಡುವುದು ಬೇಡ, ಸರ್ಕಾರ ನಿಮ್ಮೊಂದಿಗಿರಲಿದೆ ಎಂದು ವಿಶ್ವಾಸ ಮೂಡಿಸಿದರು. ಪಾಲಕರನ್ನು ಕಳೆದುಕೊಂಡ ಬಾಲಕಿಯೇ ಸಚಿವರಿಗೆ ಗುಲಾಬಿ ಹೂವು ನೀಡಿ ಮತ್ತು ಹಾರ ಹಾಕಿ ಸಚಿವರನ್ನು ಮನೆಗೆ ಬರಮಾಡಿಕೊಂಡು ಗಮನ ಸೆಳೆದಳು.
ಕೇವಲ 5 ದಿನಗಳ ಅಂತರದಲ್ಲಿ ತಂದೆ-ತಾಯಿ ಇಬ್ಬರನ್ನೂ ಬಾಲಕಿ ಕಳೆದುಕೊಂಡಿದ್ದು, ಸದ್ಯ ಚಿಕ್ಕಮ್ಮ-ಚಿಕ್ಕಪ್ಪ ಈಕೆಯನ್ನು ದತ್ತು ತೆಗೆದುಕೊಂಡು ಪಾಲನೆ ಜವಾಬ್ದಾರಿ ಹೊತ್ತಿದ್ದಾರೆ.