ಚಾಮರಾಜನಗರ: ಮಹಾಮಾರಿ ಕೊರೊನಾ ಕರಿಛಾಯೆ ಗೌರಿ, ಗಣೇಶ ಹಬ್ಬದ ಮೇಲೂ ಬೀರಿದೆ. ಜಿಲ್ಲೆಯಲ್ಲಿ ಈ ಬಾರಿ ಹಬ್ಬದ ಸರಳ ಆಚರಣೆ ಕಂಡುಬಂದಿದೆ. ಇದರೊಟ್ಟಿಗೆ, ಪುಟ್ಟ ಗಣಪತಿ ಮೂರ್ತಿಗಳನ್ನಷ್ಟೇ ಜನರು ಖರೀದಿಸುತ್ತಿದ್ದು ವ್ಯಾಪಾರ ಸಾಧಾರಣವಾಗಿದೆ.
ಹಲವಾರು ದಶಕಗಳಿಂದ ಮೂರ್ತಿ ತಯಾರಿಕೆ, ಮಾರಾಟದಲ್ಲಿ ತೊಡಗಿದ್ದವರಿಗೆ ಕೊರೊನಾ ಭಾರಿ ಹೊಡೆತ ನೀಡಿದೆ. ಸಾವಿರಾರು ರೂಪಾಯಿ ವ್ಯಾಪಾರದ ನಿರೀಕ್ಷೆ ಇಟ್ಟಿದ್ದವರ ಆಸೆಗೆ ಕೊರೊನಾ ಸೋಂಕು ತಣ್ಣೀರೆರಿಚಿದೆ. 4-5 ಅಡಿ ಗಣಪನ ಮೂರ್ತಿಗಳನ್ನೂ ಕೂಡ ಕೇಳುವವರಿಲ್ಲದ ಪರಿಸ್ಥಿತಿ ಜಿಲ್ಲೆಯಲ್ಲಿದೆ.
ಕಳೆದ 40 ವರ್ಷಗಳಿಂದ ಗಣಪತಿ ಮಾರಾಟದಲ್ಲಿ ತೊಡಗಿಕೊಂಡಿರುವ ನಾಗರಾಜ್ ಮಾತನಾಡುತ್ತಾ, 'ಈ ರೀತಿಯ ನಿರಾಸದಾಯಕ ಹಬ್ಬ, ನಾವು ಈ ರೀತಿ ವ್ಯಾಪಾರ ಇಲ್ಲದಿರುವ ಸ್ಥಿತಿ ನಿರ್ಮಾಣವಾಗಿರುವುದು ಇದೇ ಮೊದಲು. ದಿನಕ್ಕೆ 8-10 ಸಾವಿರ ರೂ.ಯಂತೆ 7 ದಿನ ವ್ಯಾಪಾರ ಮಾಡುತ್ತಿದ್ದೆ. ಈ ಬಾರಿಯಂತೂ 5 ದಿನ ವ್ಯಾಪಾರವೇ ಇಲ್ಲ' ಎಂದು ಹೇಳಿದರು.
ಹೂವು, ಹಣ್ಣು ಬೆಲೆ ಗಗನಮುಖಿಯಾಗಿದೆ. ಸೇವಂತಿ ಹೂ (ಮಾರಿಗೆ) 120 ರೂ.ಯ ಗಡಿ ದಾಟಿದೆ. ಯಾವ ಹಣ್ಣುಗಳೂ 70 ರೂ.ಗಿಂದ ಕಡಿಮೆ ಬೆಲೆಗೆ ಸಿಗುತ್ತಿಲ್ಲ.
ನಡೆದು ಬಂದ ಸಂಪ್ರದಾಯ ಉಳಿಸಲು ಸರಳವಾಗಿ ಹಬ್ಬ ಆಚರಿಸುತ್ತಿದ್ದೇವೆ. ಈ ಸಲದ ಹಬ್ಬದಲ್ಲಿ ಅದ್ಧೂರಿತನವಿಲ್ಲ. ಹಣಕಾಸಿನ ಮುಗ್ಗಟ್ಟಿನಿಂದ ಹೆಚ್ಚಿನ ಸಡಗರವೂ ಕಾಣುತ್ತಿಲ್ಲ ಎಂದು ಆಲೂರಿನ ಬಿರ್ಲಾ ಎಂಬವರು ಹೇಳುತ್ತಾರೆ.