ಚಾಮರಾಜನಗರ: ಬೆಳಗ್ಗೆಯಿಂದ ರಾತ್ರಿಯವರೆಗೆ ದಣಿವರಿಯದೆ ದುಡಿಯುತ್ತಿದ್ದ ಗೃಹಿಣಿಯರು ಈಗ ಆರಾಮವಾಗಿದ್ದರೆ ಜಿಲ್ಲೆಯ ಬಹುತೇಕ ಮನೆಗಳಲ್ಲಿ ಮನೆಗೆಲಸದ ಜವಾಬ್ದಾರಿ ಪುರುಷರ ಹೆಗಲೇರಿದೆ.
ಹೌದು, ಲಾಕ್‌ಡೌನ್ ಎಫೆಕ್ಟ್‌ನಿಂದಾಗಿ ಮನೆಗೆಲಸವನ್ನು ಮಕ್ಕಳು, ಗಂಡಸರು ಮಾಡುತ್ತಿದ್ದು, ಮಹಿಳೆಯರು ದೇಸಿ ಆಟಗಳಾದ ಚೌಕಾಬಾರ, ಅಳಗುಳಿಮನೆ, ಪಗಡೆ ಆಟವನ್ನಾಡುತ್ತಾ ರಿಲ್ಯಾಕ್ಸ್ ಮೂಡಿನಲ್ಲಿದ್ದಾರೆ. ಲಾಕ್ ಡೌನ್ ಪರಿಣಾಮ ಅನೇಕ ಕುಟುಂಬಗಳಲ್ಲಿನ ಸದಸ್ಯರಲ್ಲಿ ಪರಸ್ಪರ ಸಾಮರಸ್ಯ ಹೆಚ್ಚಾಗಿದೆ. ಮನುಷ್ಯ ಸಂಬಂಧಗಳಿಗೆ ಬೆಲೆ ಬಂದಿದೆ, ಭಾವನಾತ್ಮಕ ಸಂಬಂಧಗಳಲ್ಲಿ ಸುಧಾರಣೆ ಕಂಡಿದೆ.
ಲಾಕ್ ಡೌನ್ ಪರಿಣಾಮವಾಗಿ ಮನೆಗಳಲ್ಲೇ ಇರುವ ದಂಪತಿಗಳಲ್ಲಿ ಅನೇಕರು ತಮ್ಮ ಮನೆಯ ದಿನ ನಿತ್ಯ ಎಲ್ಲ ಕೆಲಸಗಳನ್ನ ಮಾಡುತ್ತಾ, ಹೆಂಡತಿಯರನ್ನು ಹಾಯಾಗಿ ಕುಳಿತಿರು ರಾಣಿಯ ಹಾಗೆ ಮಹಾರಾಣಿಯ ಹಾಗೆ ಎಂಬ ಡಾ.ರಾಜ್ ಕುಮಾರ್ ಅಭಿನಯದ ಹಾಲು ಜೇನು ಚಿತ್ರದ ಗೀತೆಯೊಂದನ್ನು ಹಾಡುತ್ತಾ ಕೆಲಸ ಮಾಡುತ್ತಿದ್ದಾರೆ. ಮನೆಯ ಕಸ ಗುಡಿಸುವುದರಿಂದ ಹಿಡಿದು ಅಡಿಗೆ ಮಾಡುವುದು, ಬಟ್ಟೆ ತೊಳೆಯುವುದು, ಪಾತ್ರೆ ತಿಕ್ಕುವುದು ಸೇರಿದಂತೆ ಮನೆಯ ಮುಂಭಾಗದ ಗಿಡಗಳಿಗೆ ನೀರು ಹಾಕುವ ಕೆಲಸ ಮಾಡುತ್ತಾ ಹೆಂಡತಿ ಮಕ್ಕಳೊಂದಿಗೆ ಲಾಕ್ ಡೌನ್ ಖುಷಿ ಅನುಭವಿಸುತ್ತಿದ್ದಾರೆ.
ಇದು ಕೇವಲ ಪಟ್ಟಣ ಪ್ರದೇಶಗಳಲ್ಲಿ ಮಾತ್ರವಲ್ಲ, ಗ್ರಾಮೀಣ ಪ್ರದೇಶದಲ್ಲೂ ಅನೇಕರು ಹೆಂಡತಿಗೆ ನೆರವಾಗಿ ನಿಲ್ಲುತ್ತಿದ್ದಾರೆ. ಇಡೀ ಜಗತ್ತನ್ನೆ ಕಾಡುವ ಕೊರೊನಾ ವೈರಸ್ ಗಂಡನಿಗೆ ಒಂದಷ್ಟು ಟೈಮ್ ನೀಡಿದೆ. ಅದರಿಂದ ಖುಷಿಯಾಗುತ್ತೆ, ಎಲ್ಲರೂ ಮನೆಯಲ್ಲೇ ಇರುತ್ತಾರೆ ಒಬ್ಬರಿಗೊಬ್ಬರು ಹೆಲ್ಪ್ ಮಾಡುತ್ತಾರೆ. ಈ ಮೊದಲು ನಮಗಾಗಿ ಒಂದಷ್ಟು ಟೈಮ್ ಸ್ಪೆಂಡ್ ಮಾಡುತ್ತಿರಲಿಲ್ಲ. ಈಗ ನಮಗಾಗಿ ಟೈಂ ಸ್ಪೆಂಡ್ ಮಾಡುತ್ತಿದ್ದಾರೆ, ನಮಗೆ ಖುಷಿ ಕೊಟ್ಟಿದೆ. ಲಾಕ್ ಡೌನ್ ಆಗಿದ್ದೇ ಒಳ್ಳೆಯದಾಯ್ತು ಎಂಬುದು ಗೃಹಿಣಿಯರ ಮಾತಾಗಿದೆ.
ಒಟ್ಟಾರೆ ಕೊರೊನಾ ಲಾಕ್‌ಡೌನ್ ಮನುಷ್ಯ ಸಂಬಂಧಗಳ ಬೆಲೆ ಹೆಚ್ಚಿಸಿದೆ. ಕುಟುಂಬಗಳು ದಿನವಿಡೀ ಮನೆಯಲ್ಲೇ ಇರುವುದರಿಂದ ಒಂದಿಲ್ಲೊಂದು ಚಟುವಟಿಕೆಗಳಲ್ಲಿ ತೊಡಗಿ ಕಾಲ ಕಳೆಯುತ್ತಿವೆ.