ಚಾಮರಾಜನಗರ: ವೈದ್ಯರ ನಿರ್ಲಕ್ಷ್ಯದಿಂದ 9 ತಿಂಗ ಶಿಶು ಸಾವನ್ನಪ್ಪಿದೆ ಎಂಬ ಆರೋಪವನ್ನು ಸಿಮ್ಸ್ ಆಸ್ಪತ್ರೆ ತಳ್ಳಿಹಾಕಿದ್ದು, ಇದರಲ್ಲಿ ವೈದ್ಯರು ಹಾಗೂ ಸಿಬ್ಬಂದಿಗಳ ನಿರ್ಲಕ್ಷ್ಯ ವಿಲ್ಲ ಎಂದು ಸ್ಪಷ್ಟನೆ ಕೊಟ್ಟಿದೆ.
ಮೂರು ದಿನಗಳಿಂದ 9 ತಿಂಗಳ ಹೆಣ್ಣು ಶಿಶುವೊಂದು ಜ್ವರ, ಉಸಿರಾಟ ತೊಂದರೆ, ಆಹಾರ ಸೇವಿಸದೇ ಇರುವುದರಿಂದ ಮುರುಟಿಪಾಳ್ಯದ ಶಿವರುದ್ರಮ್ಮ ಎಂಬುವವರು ಶಿಶುವನ್ನು ಜಿಲ್ಲಾಸ್ಪತ್ರೆಗೆ ಕರೆತಂದಿದ್ದರು. ವೈದ್ಯರು ಪರೀಕ್ಷಿಸಿ ಮಗುವಿನ ಕೈ-ಕಾಲು ನೀಲಿಗಟ್ಟಿರುವುದನ್ನು ಪಾಲಕರಿಗೆ ತಿಳಿಸಿ ಆನಂತರ ಮಗುವಿಗೆ ಐಸಿಯುನಲ್ಲಿ ಚಿಕಿತ್ಸೆ ನೀಡಲಾಗಿತ್ತು.
ಬಳಿಕ, ಚೇತರಿಕೆ ಕಂಡುಕೊಂಡ ಮಗುವನ್ನು ಮೈಸೂರಿಗೆ ಕರೆದೊಯ್ಯಲು ಸೂಚಿಸಲಾಗಿತ್ತು. ಅದೇ ರೀತಿಯಾಗಿ ಮಗುವನ್ನು ಆ್ಯಂಬುಲೆನ್ಸ್ಗೆ ಸಾಗಿಸುವಾಗ ಹಠಾತ್ ಹೃದಯಸ್ತಂಭನವಾಗಿದೆ ಎಂದು ಪತ್ರಿಕಾ ಪ್ರಕಟಣೆಯಲ್ಲಿ ಜಿಲ್ಲಾ ವೈದ್ಯಕೀಯ ಅಧೀಕ್ಷಕ ಡಾ.ಕೃಷ್ಣಪ್ರಸಾದ್ ತಿಳಿಸಿದ್ದಾರೆ. ಹೃದಯಸ್ತಂಭನಗೊಂಡಿದ್ದರಿಂದ ತೀವ್ರಘಟಕಕ್ಕೆ ಮಗುವನ್ನು ರವಾನಿಸಿ ಚಿಕಿತ್ಸೆ ನೀಡಿದರಾದರೂ ಚಿಕಿತ್ಸೆ ಫಲಕಾರಿಯಾಗದೇ ಶಿಶು ಮೃತಪಟ್ಟಿದೆ. ಚಿಕಿತ್ಸೆ ನೀಡುವಲ್ಲಿ ವೈದ್ಯರು, ಸಿಬ್ಬಂದಿಯ ನಿರ್ಲಕ್ಷವಿಲ್ಲ ಎಂದು ಅವರು ಸ್ಪಷ್ಟನೆ ಕೊಟ್ಟಿದ್ದಾರೆ.
ಏನಿದು ಪ್ರಕರಣ: ಚುಚ್ಚುಮದ್ದು ಕೊಟ್ಟ ಬಳಿಕ ಮಗು ಮೃತಪಟ್ಟಿದೆ ಎಂದು ವೈದ್ಯರು ಮತ್ತು ಸಿಬ್ಬಂದಿಗಳ ವಿರುದ್ದ ಪಾಲಕರು ಆರೋಪಿಸಿದ್ದರು. ಬಳಿಕ ಶಿಶುವಿನ ಶವವಿಟ್ಟು 2 ತಾಸಿಗೂ ಹೆಚ್ಚು ಕಾಲ ಕುಟುಂಬಸ್ಥರು ರಸ್ತೆ ತಡೆದು ಜಿಲ್ಲಾಸ್ಪತ್ರೆ ವಿರುದ್ದ ಪ್ರತಿಭಟನೆ ನಡೆಸಿದ್ದರು.
ಇದನ್ನೂ ಓದಿ: ಚುಚ್ಚುಮದ್ದು ನೀಡಿದ ಬಳಿಕ ಶಿಶು ಸಾವು ಆರೋಪ: ರಸ್ತೆಯಲ್ಲಿ ಶವವಿಟ್ಟು ಕುಟುಂಬಸ್ಥರ ಪ್ರತಿಭಟನೆ