ಚಾಮರಾಜನಗರ: ತಲೆ ಸಂಪೂರ್ಣ ಸುಟ್ಟು ಹೋಗಿ ದೇಹ ಅರ್ಧಂಬರ್ಧ ಬೆಂದು ಕೊಳೆತ ಸ್ಥಿತಿಯಲ್ಲಿ ಶವ ಸಿಕ್ಕಿದ ಪ್ರಕರಣವನ್ನು ಹನೂರು ಪೊಲೀಸರು ಬೇಧಿಸಿದ್ದು, ಇಬ್ಬರು ಆರೋಪಿಗಳನ್ನು ಬಂಧಿಸಿ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿದ್ದಾರೆ.
ಕಳೆದ ಜೂ. 23 ರಂದು ಹನೂರು ತಾಲೂಕಿನ ಮಣಗಳ್ಳಿ ಸಮೀಪದ ಅಲಗುಮೂಲೆ ಅರಣ್ಯ ಪ್ರದೇಶದಲ್ಲಿ ತಲೆ ಸಂಪೂರ್ಣ ಸುಟ್ಟು ಹೋಗಿ, ದೇಹ ಸಂಪೂರ್ಣ ಕೊಳೆತ ಸ್ಥಿತಿಯಲ್ಲಿ ಶವವೊಂದು ಪತ್ತೆಯಾಗಿತ್ತು. ಇದು ಮಣಗಳ್ಳಿ ಗ್ರಾಮದ ಗಾರೆ ಕೆಲಸಗಾರ ವೆಂಕಟಯ್ಯ ಎಂಬವರ ಶವ ಎಂದು ಗುರುತಿಸಲಾಗಿತ್ತು. ಇದೀಗ ಹನೂರು ಪಿಎಸ್ಐ ಮೋಹಿತ್ ಸಹದೇವ್ ನೇತೃತ್ವದ ತಂಡ ಪ್ರಕರಣ ಬೇಧಿಸಿ ಹನೂರು ತಾಲೂಕಿನ ಬಂಡಳ್ಳಿ ಗ್ರಾಮದ ಶಫೀವುಲ್ಲಾ ಷರೀಪ್ ಹಾಗೂ ಆರ್.ಎಸ್.ದೊಡ್ಡಿ ಗ್ರಾಮದ ಫರಾತ್ ಎಂಬವರನ್ನು ಬಂಧಿಸಿ ನ್ಯಾಯಾಂಗ ಬಂಧನಕ್ಕೊಪ್ಪಿಸಿದ್ದಾರೆ.
ಈ ಕುರಿತು ಸುದ್ದಿಗೋಷ್ಠಿ ಕರೆದು ಎಸ್ಪಿ ಹೆಚ್.ಡಿ.ಆನಂದಕುಮಾರ್ ಮಾತನಾಡಿ, ಮೃತ ವೆಂಕಟಯ್ಯನಿಗೂ ಮತ್ತು ಶಫೀವುಲ್ಲಾ ಷರೀಪನಿಗೂ ಗಾಂಜಾ ವ್ಯವಹಾರವಿತ್ತು. ವೆಂಕಟಯ್ಯನಿಂದ ಬರಬೇಕಾದ 50 ಸಾವಿರ ರೂ. ಹಣ ಬರದಿದ್ದಾಗ ಮಾತನಾಡಬೇಕೆಂದು ಕರೆಯಿಸಿಕೊಂಡು ಸ್ನೇಹಿತನಾದ ಫರಾತ್ ಜೊತೆ ಸೇರಿ ಕತ್ತಿಯಿಂದ ರುಂಡ-ಮುಂಡ ಬೇರ್ಪಡಿಸಿ, ರುಂಡವನ್ನು ಸುಟ್ಟು ತೆರಳಿದ್ದಾರೆ ಎಂದರು.
ವೆಂಕಟಯ್ಯನನ್ನು ಕರೆದುಕೊಂಡು ಬಂದಿದ್ದ ರಾಮಚಂದ್ರ ಎಂಬಾತ ದೂರದಿಂದಲೇ ಕೊಲೆ ಮಾಡಿ ಸುಟ್ಟು ಹಾಕಿರುವುದನ್ನು ಕಂಡಿದ್ದು, ಈತನೇ ಪ್ರಕರಣದ ಮುಖ್ಯ ಸಾಕ್ಷಿಯಾಗಿದ್ದಾನೆ. ಆರೋಪಿಗಳು ಪೊಲೀಸರಿಗೆ ವಿಚಾರ ತಿಳಿಸಕೂಡದು ಎಂದು ಧಮ್ಕಿ ಹಾಕಿದ್ದರಿಂದ ರಾಮಚಂದ್ರ ಘಟನೆ ವಿವರಿಸಲು ಮುಂದೆ ಬಂದಿರಲಿಲ್ಲ. ಕೃತ್ಯಕ್ಕೆ ಬಳಸಿದ್ದ ಕತ್ತಿ, ಮೋಟಾರ್ ಬೈಕನ್ನು ವಶಪಡಿಸಿಕೊಂಡಿದ್ದು, ಮತ್ತಷ್ಟು ತನಿಖೆ ನಡೆಸಬೇಕಿದೆ ಎಂದು ಎಸ್ಪಿ ತಿಳಿಸಿದ್ದಾರೆ.
ಎಎಸ್ಪಿ ಅನಿತಾ, ಕೊಳ್ಳೇಗಾಲ ಡಿವೈಎಸ್ಪಿ ಪುಟ್ಟಮಾದಯ್ಯ, ಹನೂರು ಪಿಎಸ್ಐ ಮೋಹಿತ್ ಸಹದೇವ್ ಸೇರಿದಂತೆ ಇತರ ಸಿಬ್ಬಂದಿ ಕಾರ್ಯಾಚರಣೆಯಲ್ಲಿ ಭಾಗವಹಿಸಿದ್ದರು.