ಚಾಮರಾಜನಗರ: ಸ್ವಂತ ಸೂರಿಲ್ಲದೇ ಜೀವನ ಸಾಗಿಸುತ್ತಿರುವ ನನಗೆ ಈಗ ಮಗನ ಮದುವೆ ಚಿಂತೆಯೂ ಬಾಧಿಸುತ್ತಿದೆ. ಸಾಕು ಮಗನ ಬದುಕಿನ ರೂವಾರಿ ನಾನೇ ಆಗಿದ್ದೇನೆ ಎಂದು ವೃಕ್ಷಮಾತೆ ಸಾಲುಮರದ ತಿಮ್ಮಕ್ಕ ಭಾವುಕರಾಗಿ ಮಾತನಾಡಿದರು.
ಕೊಳ್ಳೇಗಾಲದ ಮಾನಸ ಶಿಕ್ಷಣ ಸಂಸ್ಥೆಯಲ್ಲಿ ಮಾನಸ ಪ್ರಶಸ್ತಿ ಸ್ವೀಕರಿಸಿ ಮಾತನಾಡಿದ ಅವರು, ನನಗೆ ಉಳಿಯಲು ಒಂದು ಸ್ವಂತ ಸೂರು ಇಲ್ಲ. ವಾಸಿಸಿರುವುದು ಒಂದು ಬಾಡಿಗೆ ಮನೆಯಲ್ಲಿ. ಕಾರ್ಯಕ್ರಮಕ್ಕೆ ಕರೆದು ಸನ್ಮಾನಿಸಿ ಕೆಲವು ರೂಪಾಯಿಗಳನ್ನು ನೀಡುತ್ತಾರೆ. ನನ್ನ ಜೀವನೋಪಾಯಕ್ಕೆ ಸರ್ಕಾರ ಸ್ಪಂದಿಸಬೇಕು. ಬಿ.ಎಸ್.ಯಡಿಯೂರಪ್ಪ 2ನೇ ಬಾರಿ ಸಿಎಂ ಆಗಿದ್ದ ವೇಳೆ ಮನೆ ಕಟ್ಟಿಸಿಕೊಡುತ್ತೇನೆಂದು ಹೇಳಿದ್ದರು. ಅದು ಕೂಡ ಈಡೇರಿಲ್ಲ ಎಂದು ಅಳಲು ತೋಡಿಕೊಂಡರು.
ನನ್ನ ಸಾಕು ಮಗ ಉಮೇಶ್ ನನಗೆ ದೇವರು ಕೊಟ್ಟ ಮಗ. ನಾನು ಆತನಿಗೆ ದೇವರು ಕೊಟ್ಟ ಅಮ್ಮ. ಆತನ ಜೀವನದ ರೂವಾರಿ ನಾನಾಗಿದ್ದೇನೆ. ಅವನ ಬದುಕನ್ನು ರೂಪಿಸುವ ಹೊಣೆ ನನ್ನದಾಗಿರುವುದರಿಂದ ಆತನ ಮದುವೆಯ ಚಿಂತೆಯೊಂದಾಗಿದೆ. ಏನೇ ಆದರೂ ಈ ವರ್ಷ ಅವನ ಮದುವೆ ಮಾಡೇ ತೀರುತ್ತೇನೆಂದರು.
ಸರ್ಕಾರ ಈಗಲಾದರೂ ನಮ್ಮ ನೆರವಿಗೆ ಧಾವಿಸಬೇಕು. ಕೆಲವೊಮ್ಮೆ ಬಾಡಿಗೆ ಕಟ್ಟಲು ದುಸ್ತರವಾಗಲಿದೆ ಎಂದು ಅವರು ಅಳಲು ತೋಡಿಕೊಂಡರು.
ಇನ್ನು ಇದಕ್ಕೂ ಮುನ್ನ ಸಾಲುಮರದ ತಿಮ್ಮಕ್ಕರಿಗೆ ಹೃದಯಸ್ಪರ್ಶಿಯಾಗಿ ಪ್ರಶಸ್ತಿ ವಿತರಿಸಿ ಹೂವಿನ ದಳಗಳನ್ನು ಸುರಿದು ಅಭಿನಂದಿಸಲಾಯಿತು. ಮಾನಸ ಶಿಕ್ಷಣ ಸಂಸ್ಥೆಯು ಕಳೆದ 12 ವರ್ಷಗಳಿಂದ ನೀಡುತ್ತಿರುವ ಸಿದ್ದೇಗೌಡ ಲಿಂಗಮ್ಮ ಮಾನಸ ಪ್ರಶಸ್ತಿ ಮತ್ತು 50 ಸಾವಿರ ರೂ. ಪ್ರಶಸ್ತಿ ಮೊತ್ತ ವಿತರಿಸಲಾಯಿತು.
3 ದಿನ ಹಬ್ಬವೋ ಹಬ್ಬ: ಮಾನಸ ವಿದ್ಯಾ ಸಂಸ್ಥೆಯ ಮಾನಸೋತ್ಸವ ಕಾರ್ಯಕ್ರಮಕ್ಕೆ ಚಾಲನೆ ದೊರೆತಿದ್ದು, ಶನಿವಾರ ಮತ್ತು ಭಾನುವಾರ ರಂಗುರಂಗಿನ ಕಾರ್ಯಕ್ರಮ ನಡೆಯಲಿದೆ. ನಾಟಕ, ಹಾಸ್ಯ ಸಂಜೆ ಜೊತೆಗೆ ಸಾಧಕರಿಗೆ ಸನ್ಮಾನವೂ ಕೂಡ ಇರಲಿದೆ.