ಚಾಮರಾಜನಗರ: ವಿದ್ಯುತ್ ಶಾರ್ಟ್ ಸರ್ಕ್ಯೂಟ್ನಿಂದ ಸಿಲಿಂಡರ್ ಸ್ಫೋಟಗೊಂಡು ಯುವಕನೊಬ್ಬ ಸುಟ್ಟು ಕರಕಲಾಗಿರುವ ಘಟನೆ ಗುಂಡ್ಲುಪೇಟೆ ತಾಲೂಕಿನ ಮಳವಳ್ಳಿ ಗ್ರಾಮದಲ್ಲಿ ಬುಧವಾರ ತಡರಾತ್ರಿ ನಡೆದಿದೆ. ಮಳವಳ್ಳಿ ಗ್ರಾಮದ ಸ್ವಾಮಿ (28) ಮೃತ ದುರ್ದೈವಿ. ಬುಧವಾರ ರಾತ್ರಿ ಕುಡಿದು ಮನೆಯಲ್ಲಿ ಮಲಗಿದ್ದ ವೇಳೆ ಶಾರ್ಟ್ ಸರ್ಕ್ಯೂಟ್ ಉಂಟಾಗಿ ಸಿಲಿಂಡರ್ ಸ್ಫೋಟಗೊಂಡಿದೆ.
ಇದರಿಂದ ಮನೆ ಮೇಲ್ಛಾವಣಿಯ ಹೆಂಚು ಹಾರಿಹೋಗಿದ್ದು, ಮನೆಯಲ್ಲಿದ್ದ ವಿವಿಧ ವಸ್ತುಗಳು ಸಹ ಸುಟ್ಟಿವೆ. ಮೃತ ಯುವಕನು ಮದ್ಯದ ನಶೆಯಲ್ಲಿದ್ದಿದ್ದರಿಂದ ಅವಘಡದಿಂದ ಪಾರಾಗಲಾಗದೇ ಮಲಗಿದ್ದಲ್ಲೇ ಅಸುನೀಗಿದ್ದಾನೆ. ಈತ ಪ್ರತ್ಯೇಕವಾಗಿ ವಾಸ ಮಾಡುತ್ತಿದ್ದ ಎಂದು ತಿಳಿದು ಬಂದಿದ್ದು, ಅಜ್ಜಿ ಮತ್ತು ಪಾಲಕರು ಬೇರೆ ಮನೆಯಲ್ಲಿ ಇರುತ್ತಿದ್ದರು ಎಂದು ಹೇಳಲಾಗುತ್ತಿದೆ.
ವಿದ್ಯುತ್ ಶಾರ್ಟ್ ಸರ್ಕ್ಯೂಟ್ ಹಾಗೂ ಸಿಲಿಂಡರ್ ಸ್ಫೋಟದಿಂದ ಯುವಕ ಮೃತಪಟ್ಟಿದ್ದಾನೆ. ಈ ಹಿನ್ನೆಲೆಯಲ್ಲಿ ಚೆಸ್ಕಾಂ ಹಾಗೂ ಗ್ಯಾಸ್ ಕಂಪನಿಯವರು ಕೂಡಲೇ ಮೃತ ಯುವಕನ ಕುಟುಂಬಕ್ಕೆ ಪರಿಹಾರ ನೀಡಬೇಕು ಇಲ್ಲದಿದ್ದರೆ ಆಯಾ ಕಚೇರಿಗಳ ಮುಂದೆ ಪ್ರತಿಭಟನೆ ನಡೆಸಲಾಗುವುದು ಎಂದು ಮಳ್ಳವಳ್ಳಿ ಗ್ರಾಮಸ್ಥರು ಎಚ್ಚರಿಕೆ ನೀಡಿದ್ದಾರೆ.
ಓದಿ: ಇಂಗ್ಲಿಷ್ ಓದಲು ಕಷ್ಟವೆಂದು ಆತ್ಮಹತ್ಯೆ ಯತ್ನ: ತುಮಕೂರಲ್ಲಿ ವಿಷ ಸೇವಿಸಿದ ಏಳನೇ ತರಗತಿ ವಿದ್ಯಾರ್ಥಿ!