ಕೊಳ್ಳೇಗಾಲ: ಸೇತುವೆ ಮೇಲೆ ಕುಳಿತಿದ್ದ ವ್ಯಕ್ತಿ ಆಯ ತಪ್ಪಿ ಕೆರೆಗೆ ಬಿದ್ದು ಸಾವನ್ನಪ್ಪಿರುವ ಘಟನೆ ಪಟ್ಟಣ ವ್ಯಾಪ್ತಿಯಲ್ಲಿ ನಡೆದಿದೆ.
ಪಟ್ಟಣದ ಅಮ್ಮನ್ ಕಾಲೋನಿ ಬಡಾವಣೆಯ ನಿವಾಸಿ ಶ್ರೀನಿವಾಸ್(31) ಮೃತ ದುರ್ದೈವಿ.
ಶ್ರೀನಿವಾಸ್ ತನ್ನ ಸ್ನೇಹಿತನಾದ ಚಂದ್ರಶೇಖರ್ ಎಂಬಾತನ ಜೊತೆಯಲ್ಲಿ ಜೆಎಸ್ಎಸ್ ಕಾಲೇಜು ರಸ್ತೆ ಬಳಿಯ ಸೇತುವೆಯ ಮೇಲೆ ಕುಳಿತಿದ್ದಾಗ ಆಕಸ್ಮಿಕವಾಗಿ ಕೆರೆಗೆ ಬಿದ್ದು ಸಾವನ್ನಪ್ಪಿದ್ದಾನೆ. ಇನ್ನು ಜೊತೆಯಲ್ಲಿದ್ದ ಸ್ನೇಹಿತ ಗಾಬರಿಗೊಂಡು ಶ್ರೀನಿವಾಸ್ ಮನೆಯವರಿಗೆ ವಿಷಯ ತಿಳಿಸಿದ್ದಾನೆ. ತಕ್ಷಣ ಪೋಷಕರು ಪೊಲೀಸರಿಗೆ ಮಾಹಿತಿ ನೀಡಿದ್ದಾರೆ.
ವಿಷಯ ತಿಳಿದು ಪೊಲೀಸರು ಸ್ಥಳಕ್ಕಾಗಮಿಸಿದರು. ಆದರೆ ಕೆರೆಯಲ್ಲಿ ಗಿಡಗಂಟಿಗಳು ಹೆಚ್ಚಿದ್ದರಿಂದ ಮೃತದೇಹ ಹೊರ ತೆಗೆಯಲು ಅಸಾಧ್ಯವಾಗಿದೆ. ಈ ಹಿನ್ನೆಲೆಯಲ್ಲಿ ಅಗ್ನಿಶಾಮಕ ದಳವನ್ನು ಕರೆಸಿ ಶವ ಹೊರ ತೆಗೆಯಲಾಗಿದೆ. ಬಳಿಕ ಪಟ್ಟಣದ ಸರ್ಕಾರಿ ಆಸ್ಪತ್ರೆಗೆ ರವಾನಿಸಲಾಯಿತು.
ಈ ಸಂಬಂಧ ಪಟ್ಟಣ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಮರಣೋತ್ತರ ಪರೀಕ್ಷೆ ನಡೆಸಿದ ಬಳಿಕ ವಾರಸುದಾರರಿಗೆ ಶವವನ್ನು ಒಪ್ಪಿಸಲಾಯಿತು.