ಚಾಮರಾಜನಗರ : ಅವಧಿ ಮೀರಿದ್ದರೂ ವಾಸ್ತವ್ಯ ಹೂಡಿ ಕೊನೆಗೇ ಮಲೆಮಹದೇಶ್ವರ ಬೆಟ್ಟ ಅಭಿವೃದ್ಧಿ ಪ್ರಾಧಿಕಾರದ ಅಧಿಕಾರಿಗಳಿಂದ ಹೊರದೂಡಿಸಲ್ಪಟ್ಟು ಬೀದಿಯಲ್ಲಿದ್ದ ಕುಟುಂಬಕ್ಕೆ ಕೊನೆಗೂ ತಾತ್ಕಾಲಿಕ ವಸತಿ ಸಿಕ್ಕಿದೆ.
ಮಲೆಮಹದೇಶ್ವರ ಬೆಟ್ಟ ಅಭಿವೃದ್ಧಿ ಪ್ರಾಧಿಕಾರದ ನೌಕರರ ಸಂಘ, ಅಖಿಲ ಭಾರತ ವೀರಶೈವ ಮಹಾಸಭಾ ಘಟಕ ಮತ್ತು ಪ್ರಾಧಿಕಾರದ ಅಧಿಕಾರಿಗಳೊಂದಿಗೆ ಇಂದು ಸಂಧಾನ ಸಭೆ ನಡೆದಿದ್ದು ದಿ. ಜಯಸ್ವಾಮಿ ಕುಟುಂಬಕ್ಕೆ ತಾತ್ಕಾಲಿಕ ವಸತಿ ಸೌಲಭ್ಯ, ಮಗನಿಗೆ ಪ್ರಾಧಿಕಾರದಲ್ಲಿ ಹೊರಗುತ್ತಿಗೆ ಆಧಾರದಲ್ಲಿ ಕೆಲಸ ನೀಡಲಾಗಿದೆ. ಈಗಾಗಲೇ ಗ್ರ್ಯಾಚುಯಿಟಿ ಹಣದಲ್ಲಿ 3.11 ಲಕ್ಷ ಪಾವತಿಸಲಾಗಿದೆ. ಉಳಿಕೆ ಹಣದಲ್ಲಿ ಬಾಡಿಗೆ ಹಣ ಹಿಡಿದುಕೊಂಡು ಉಳಿದ ಹಣವನ್ನು ಪಾವತಿಸಲಾಗುವುದು ಎಂದು ತಿಳಿಸಿದ್ದಾರೆ.
ಏನಿದು ಘಟನೆ?: ಜಯಸ್ವಾಮಿ ಎಂಬುವರು ಪ್ರಾಧಿಕಾರದಲ್ಲಿ ಖಾಯಂ ನೌಕರರಾಗಿ ಕರ್ತವ್ಯ ನಿರ್ವಹಿಸುತ್ತಿದ್ದರು. ಈಗ್ಗೆ ಕೆಲ ವರ್ಷಗಳ ಹಿಂದೆ ಕಿಡ್ನಿ ವೈಫಲ್ಯದಿಂದ ನಿಧನರಾದ ಹಿನ್ನೆಲೆ ಅವರ ಕುಟುಂಬ ವಾಸವಿದ್ದ ಮನೆ ಖಾಲಿ ಮಾಡುವಂತೆ ಪ್ರಾಧಿಕಾರ ನೋಟಿಸ್ ಜಾರಿಗೂಳಿಸಿತ್ತು.
ಪ್ರಾಧಿಕಾರದ ಸೂಚನೆಗೆ ವಿರೋಧ ವ್ಯಕ್ತಪಡಿಸಿದ ಜಯಸ್ವಾಮಿ ಮನೆಯವರು ವಾಸ ಮಾಡದಿದ್ದರಿಂದ ಪ್ರಾಧಿಕಾರದ ಅಧಿಕಾರಿಗಳು ಮನೆಯನ್ನು ಖಾಲಿ ಮಾಡಿಸಿದ್ದರು. ಕಳೆದ 8 ದಿನಗಳಿಂದಲೂ ಕುಟುಂಬ ಬೀದಿಯಲ್ಲೇ ವಾಸಿಸುತ್ತಿದ್ದ ಹಿನ್ನೆಲೆಯಲ್ಲಿ ಪ್ರಾಧಿಕಾರದ ನೌಕರರು, ಲಿಂಗಾಯತ ಸಂಘಟನೆ ಪ್ರಾಧಿಕಾರದೊಟ್ಟಿಗೆ ಸಂಧಾನ ಸಭೆ ನಡೆಸಿ ಪ್ರಕರಣಕ್ಕೆ ಇತಿಶ್ರೀ ಹಾಡಿದ್ದಾರೆ.
ಜಾಹಿರಾತು : ನಿಮ್ಮ ಸೂಕ್ತ ಸಂಗಾತಿ ಹುಡುಕುತ್ತಿರುವಿರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ ನೋಂದಣಿ ಉಚಿತ