ಚಾಮರಾಜನಗರ: ಎಲ್ಪಿಜಿ ಸಿಲಿಂಡರ್ ಮತ್ತು ದಿನಬಳಕೆ ವಸ್ತುಗಳ ದರ ಏರಿಕೆಯಿಂದಾಗಿ ನಗರದ ಹೋಟೆಲ್ಗಳಲ್ಲಿ ತಿಂಡಿ- ತಿನಿಸುಗಳ ದರವೂ ಏರಿಕೆ ಕಂಡಿದೆ. ಇದು ಗ್ರಾಹಕರ ಜೇಬು ಸುಡುವಂತಾಗಿದೆ.
ನಗರದ ಬಹುತೇಕ ಹೋಟೆಲ್ಗಳು ದರ ಪರಿಷ್ಕರಿಸಿದ್ದು, ಊಟದ ದರ 10 ರೂ. ಮತ್ತು ದೋಸೆ ದರವನ್ನು 5 ರೂ. ಏರಿಕೆ ಮಾಡಿವೆ. ನಾರ್ಥ್ ಇಂಡಿಯನ್ ಮತ್ತು ಚೈನೀಸ್ ತಿನಿಸುಗಳ ಬೆಲೆಯಲ್ಲಿ ಯಾವುದೇ ಬದಲಾವಣೆ ಕಂಡುಬಂದಿಲ್ಲ.
ಒಂದು ಊಟದ ಬೆಲೆ 60 ರೂ. ಇದ್ದದ್ದು ಈಗ 70 ರೂ. ಆಗಿದೆ. ಮಿನಿ ಊಟದ ದರ 45 ರೂ. ಇದ್ದದ್ದು 50 ಆಗಿದೆ. ಅದೇ ರೀತಿ 45 ರೂ. ಸೆಟ್ ದೋಸೆ 50 ರೂ., ಮಸಾಲೆ ದೋಸೆ 50 ರೂ. ಇದ್ದದ್ದು 55 ರೂ., ಈರುಳ್ಳಿ ದೋಸೆ 45 ರೂ.ಗೆ ಏರಿಕೆ ಕಂಡಿದೆ.
ಊಟ ಮತ್ತು ದೋಸೆ ದರವನ್ನು ಮಾತ್ರ ಹೆಚ್ಚಿಸಲಾಗಿದೆ. ಗ್ಯಾಸ್ ಹಾಗೂ ನಿತ್ಯ ಬಳಕೆ ವಸ್ತುಗಳ ಬೆಲೆ ಏರಿಕೆ ಕಂಡಿರುವುದರಿಂದ ದರ ಪರಿಷ್ಕರಣೆ ಅನಿವಾರ್ಯವಾಗಿತ್ತು.
ಗ್ರಾಹಕರು ಹೊಸ ಬೆಲೆಗೆ ಹೊಂದಿಕೊಳ್ಳುತ್ತಿದ್ದಾರೆ. ಕೆಲವರು ವಿರೋಧಿಸಿದ್ದು, ಪರಿಸ್ಥಿತಿ ಮನವರಿಕೆ ಮಾಡಿಕೊಟ್ಟಿದ್ದೇವೆ ಎಂದು ಹೋಟೆಲ್ ಮಾಲೀಕರೊಬ್ಬರು ಈಟಿವಿ ಭಾರತಕ್ಕೆ ಮಾಹಿತಿ ನೀಡಿದರು.