ಚಾಮರಾಜನಗರ: ರಸ್ತೆ ತಿರುವಿನಲ್ಲಿ ಮರದ ದಿಮ್ಮಿ ತುಂಬಿದ ಲಾರಿ ಪಲ್ಟಿಯಾದ ಹಿನ್ನೆಲೆಯಲ್ಲಿ ಬೆಂಗಳೂರು- ದಿಂಡಿಗಲ್ ರಾಷ್ಟ್ರೀಯ ಹೆದ್ದಾರಿಯಲ್ಲಿ ಬರೋಬ್ಬರಿ 14 ತಾಸು ಟ್ರಾಫಿಕ್ ಜಾಮ್ ಉಂಟಾಗಿದ್ದ ಘಟನೆ ನಡೆದಿದೆ.
ದಿಂಬಂನ 24 ನೇ ತಿರುವಿನಲ್ಲಿ ಮೈಸೂರು ಜಿಲ್ಲೆಯ ಹುಣಸೂರಿನಿಂದ ಮರದ ದಿಮ್ಮಿ ಹೊತ್ತು ಬಂದಿದ್ದ ಲಾರಿಯೊಂದು ನಿಯಂತ್ರಣ ತಪ್ಪಿ ಪಲ್ಟಿಯಾಗಿದೆ. ಪರಿಣಾಮ ಸರಕು ತುಂಬಿದ ವಾಹನ ಸೇರಿದಂತೆ ಸಾರಿಗೆ ಸಂಸ್ಥೆ ಬಸ್ಗಳು, ಕಾರುಗಳು ಮುಂದಕ್ಕೂ ಚಲಿಸಲಾಗದೆ, ಹಿಂದಕ್ಕೂ ತೆರಳಲಾಗದೇ ಶುಕ್ರವಾರ ರಾತ್ರಿ 8 ಗಂಟೆಯಿಂದ ಇಂದು ಬೆಳಗ್ಗೆ 10 ಗಂಟೆವರೆಗೆ ಬರೋಬ್ಬರಿ 14 ತಾಸು ನಿಂತಲ್ಲೇ ನಿಂತು ಪ್ರಯಾಣಿಕರು, ಚಾಲಕರು ಹೈರಾಣಾಗಿದ್ದಾರೆ.
ವಿಷಯ ತಿಳಿದ ಸತ್ಯಮಂಗಲಂ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಪಲ್ಟಿಯಾಗಿದ್ದ ಲಾರಿಯನ್ನು ತೆರವುಗೊಳಿಸಿ ಸಂಚಾರಕ್ಕೆ ಅನುವು ಮಾಡಿಕೊಟ್ಟರು. ಜೋರು ಮಳೆಯಾಗುತ್ತಿದ್ದರಿಂದ ವಾಹನದಿಂದ ಕೆಳಗಿಳಿಯಲು ಆಗದೇ ಕಾಫಿ-ತಿಂಡಿ ಸಿಗದೆ ಚಾಲಕರು ಪರದಾಡಿದರು ಎಂದು ಚಾಮರಾಜನಗರದಿಂದ ತೆರಳಿದ್ದ ಲಾರಿ ಚಾಲಕ ನಾಗೇಂದ್ರ ಈಟಿವಿ ಭಾರತಕ್ಕೆ ಮಾಹಿತಿ ನೀಡಿದ್ದಾರೆ.
ವಾಹನಗಳು ನಿಯಂತ್ರಣ ತಪ್ಪಿ ಈ ರಸ್ತೆಯಲ್ಲಿ ಪಲ್ಟಿಯಾಗುವುದು ಇತ್ತೀಚಿನ ದಿನಗಳಲ್ಲಿ ಹೆಚ್ಚಾಗಿದ್ದು, ವಾಹನ ಸವಾರರು ಟ್ರಾಫಿಕ್ ಕಿರಿಕಿರಿ ಅನುಭವಿಸುತ್ತಿದ್ದಾರೆ.
ಇದನ್ನೂ ಓದಿ:ಜೈವಿಕ ಇಂಧನ ತಯಾರಿಕೆಯಲ್ಲಿ ಹೊಸ ಕ್ರಾಂತಿ: ರೈತರಿಗೆ ವರದಾನ ಈ ಲಾಭ ತರುವ ಘಟಕ