ಚಾಮರಾಜನಗರ: ಜಿಲ್ಲೆಯಲ್ಲಿ ಚಿರತೆ ದಾಳಿ ಹೆಚ್ಚಾಗುತ್ತಿದ್ದು, ಪಾಳು ಬಿದ್ದ ಕಲ್ಲು ಕ್ವಾರಿಗಳಿಂದ ಪ್ರಾಣಿ ಮತ್ತು ಮಾನವ ಸಂಘರ್ಷ ಏರಿಕೆಯಾಗುತ್ತಿದೆ.
ನಂಜದೇವನಪುರ, ಕಡುವಿನಕಟ್ಟೆ ಹುಂಡಿ ಬಳಿಕ ಚಾಮರಾಜನಗರ ತಾಲೂಕಿನ ನರಸಮಂಗಲದಲ್ಲಿ ಮಧು ಎಂಬವರ ತೋಟದಲ್ಲಿ ಚಿರತೆ ದಾಳಿಗೆ ಕರುವೊಂದು ಬಲಿಯಾಗಿದೆ. ಇನ್ನೆರಡು ಕರು ನಾಪತ್ತೆಯಾಗಿವೆ. ಕರುವನ್ನು ತಿಂದು ಚಿರತೆ ಪರಾರಿಯಾಗಿದೆ. ಸ್ಥಳಕ್ಕೆ ಅರಣ್ಯಾಧಿಕಾರಿಗಳು ಭೇಟಿ ನೀಡಿ, ಪರಿಹಾರದ ಭರವಸೆ ನೀಡಿದ್ದಾರೆ.
ಒಂದೇ ತಿಂಗಳಿನಲ್ಲಿ ಚಿರತೆ ಹಾಗೂ ಹುಲಿ ಬೋನಿಗೆ ಸೆರೆಯಾದ ಕಾರಣ ಜನರು ನಿಟ್ಟುಸಿರು ಬಿಟ್ಟಿದ್ದರು. ಆದರೆ, ಒಂದು ಗ್ರಾಮದ ಬಳಿಕ ಮತ್ತೊಂದು ಗ್ರಾಮದಲ್ಲಿ ಪ್ರಾಣಿ-ಮಾನವ ಸಂಘರ್ಷ ದಿನೆದಿನೇ ಹೆಚ್ಚಾಗುತ್ತಿರುವುದು ಆತಂಕಕಾರಿಯಾಗಿದೆ. ಕಲ್ಲು ಕ್ವಾರಿಗಳನ್ನು ಮುಚ್ಚದೇ ಹಾಗೇ ಪಾಳು ಬಿಟ್ಟಿರುವುದು ಚಿರತೆಗಳ ಅವಾಸಸ್ಥಾನವಾಗಿ ಮಾರ್ಪಟ್ಟಿದೆ.
ಈ ಕುರಿತು ಗಣಿ ಮತ್ತು ಭೂ ವಿಜ್ಞಾನ ಇಲಾಖೆ ನಿರ್ಲಕ್ಷ್ಯ ವಹಿಸಿದೆ. ಈ ಹಿಂದೆ ಸಚಿವ ಸಿ.ಟಿ.ರವಿ ಅವರು ಜಿಲ್ಲಾ ಪ್ರವಾಸದ ವೇಳೆ ಗಣಿ ಮತ್ತು ಭೂ ವಿಜ್ಞಾನ ಅಧಿಕಾರಿಗಳ ಸಭೆಯಲ್ಲಿ ಪಾಳು ಬಿದ್ದ ಕಲ್ಲು ಕ್ವಾರಿಗಳನ್ನು ಗಣಿಗಾರಿಕೆ ನಡೆಸಿದವರೇ ಮುಚ್ಚಬೇಕು. ಅವರು ಸೃಷ್ಟಿಸಿರುವ ಆಳ ಕಂದಕಗಳಿಗೆ ಜನ-ಜಾನುವಾರು ಬಿದ್ದು ಮೃತಪಡುವ ಅಪಾಯ ಹೆಚ್ಚಿದೆ ಎಂದು ಆತಂಕ ಹೊರಹಾಕಿದ್ದರು.