ಚಾಮರಾಜನಗರ: ತೀರ್ಥ ಕ್ಷೇತ್ರಗಳಿಗೆ ತೆರಳುವ ಕನ್ನಡಿಗರ ಮೇಲೆ ತಮಿಳುನಾಡಿನಲ್ಲಿ ವಿನಾಕಾರಣ ಕೆಲವರು ಪುಂಡಾಟಿಕೆ ನಡೆಸುತ್ತಿರುವುದನ್ನ ಖಂಡಿಸಿ ನಗರದಲ್ಲಿ ಕನ್ನಡಪರ ಸಂಘಟನೆ ಕಾರ್ಯಕರ್ತರು ಲಾಠಿ ಚಳವಳಿ ನಡೆಸಿದರು.
ಚಾಮರಾಜೇಶ್ವರ ದೇಗುಲದಿಂದ ಭುವನೇಶ್ವರಿ ವೃತ್ತದವರೆಗೆ ಲಾಠಿ ತೋರಿಸುತ್ತ ತಮಿಳುನಾಡು ಸರ್ಕಾರ ಮತ್ತು ಅಲ್ಲಿನ ಪುಂಡರ ವಿರುದ್ಧ ಘೋಷಣೆಗಳನ್ನು ಕೂಗಿ ಆಕ್ರೋಶ ಹೊರ ಹಾಕಿದರು. ಇದೇ ವೇಳೆ ರಾ. ಹೆದ್ದಾರಿಯನ್ನು 20 ನಿಮಿಷಕ್ಕೂ ಹೆಚ್ಚು ಕಾಲ ತಡೆ ನಡೆಸಿ ಪುಂಡರ ವಿರುದ್ಧ ಧಿಕ್ಕಾರದ ಘೋಷಣೆಗಳನ್ನು ಕೂಗಿದರು.
ಇದೇ ವೇಳೆ ಕನ್ನಡಪರ ಹೋರಾಟಗಾರ ಚಾ.ರಂ.ಶ್ರೀನಿವಾಸಗೌಡ ಮಾತನಾಡಿ, ನಿರಂತರವಾಗಿ ಕನ್ನಡಿಗ ಭಕ್ತರ ಮೇಲೆ ಹಲ್ಲೆ ನಡೆಯುತ್ತಿದೆ. ತಮಿಳುನಾಡಿನ ಗೂಂಡಾಗಳ ವರ್ತನೆಯನ್ನು ಅಲ್ಲಿನ ಸರ್ಕಾರವೂ ಖಂಡಿಸಿಲ್ಲ ಎಂದು ಕಿಡಿಕಾರಿದರು. ಗಾಜಿನ ಮನೆಯಲ್ಲಿ ಕುಳಿತು ಕಲ್ಲು ಹೊಡೆಯುವುದನ್ನು ಅಲ್ಲಿನವರು ನಿಲ್ಲಿಸಬೇಕು. ಕನ್ನಡಿಗರ ಸಂಖ್ಯೆ ತಮಿಳುನಾಡಿನಲ್ಲಿ ಬಹಳ ಕಡಿಮೆ. ತಮಿಳರು ರಾಜ್ಯದ ಮೂಲೆಮೂಲೆಗಳಲ್ಲೂ ಇದ್ದಾರೆ. ಇದನ್ನು ಅವರು ಸೂಕ್ಷ್ಮವಾಗಿ ಅರಿಯಬೇಕೆಂದು ಎಚ್ಚರಿಸಿದರು.
ಅಲ್ಲಿನ ಕೆಲವರು ಪುಂಡಾಟ ನಡಸಿದರೂ ಅಲ್ಲಿನ ಸರ್ಕಾರವಾಗಲಿ, ನಮ್ಮ ಸರ್ಕಾರವಾಗಲಿ ಕ್ರಮವಹಿಸದಿರುವುದು ವಿಪರ್ಯಾಸ. ಕೇಂದ್ರ ಸರ್ಕಾರ ಮಧ್ಯಪ್ರವೇಶಿಸಿ ತಮಿಳುನಾಡಿನ ಸರ್ಕಾರವನ್ನು ವಜಾಗೊಳಿಸಬೇಕೆಂದು ಒತ್ತಾಯಿಸಿದರು.