ಚಾಮರಾಜನಗರ: ಪ್ರಧಾನಿ ಮೋದಿ ಅವರಿಗೆ ಜಾಗತಿಕ ನಾಯಕ ಪಟ್ಟ ಕೊಟ್ಟಿರುವ ಸರ್ವೇ ಮುಖ್ಯವಲ್ಲ, ದೇಶಕ್ಕೆ ನರೇಂದ್ರ ಮೋದಿ ಅವರ ಕೊಡುಗೆ ಏನು ಎಂಬುದು ಮುಖ್ಯ ಎಂದು ಕೆಪಿಸಿಸಿ ಕಾರ್ಯಾಧ್ಯಕ್ಷ ಆರ್.ಧ್ರುವನಾರಾಯಣ ಹೇಳಿದರು.
ನಗರದಲ್ಲಿ ಸುದ್ದಿಗಾರರೊಂದಿಗೆ ಅವರು ಮಾತನಾಡಿ, ಕಳೆದ 7 ವರ್ಷದ ಅವಧಿಯಲ್ಲಿ ದೇಶ ಮುಂದುವರೆದಿದ್ದರೇ ಮೋದಿ ಅವರಿಗೆ ಬೇಕಾದರೆ ಕಿರೀಟ ಕೊಡಲಿ ನಮ್ಮ ತಕರಾರಿಲ್ಲ. ಆದರೆ, ಕೇಂದ್ರ ಸರ್ಕಾರದ ಆಡಳಿತ ಸಂಪೂರ್ಣ ವೈಫಲ್ಯ ಕಂಡಿದೆ, ಬಿಜೆಪಿ ಅಧಿಕಾರಕ್ಕೆ ಬಂದಾಗ ದೇಶದ ಪರಿಸ್ಥಿತಿ ಹೇಗಿತ್ತು- ಈಗ ಹೇಗಿದೆ, ನಿರುದ್ಯೋಗ ಪ್ರಮಾಣ, ಜಿಡಿಪಿ ಇವುಗಳ ಅಂಕಿ- ಅಂಶವನ್ನು ಶ್ವೇತಪತ್ರದಲ್ಲಿ ಹೊರಡಿಸಲಿ. ಅದು ಬಿಟ್ಟು ಪಲಾಯನವಾದ ಮಾಡಿಕೊಂಡು ಜನರ ಮನಸ್ಸನ್ನು ಬೇರೆ ಕಡೆ ತಿರುಗಿಸುತ್ತಾರೆ ಎಂದು ಕಿಡಿಕಾರಿದರು.
ಪ್ರಧಾನಿ ಮೋದಿ ಅವರಲ್ಲಿ ಮೌಢ್ಯವೇ ತುಂಬಿದೆ, ವೈಜ್ಞಾನಿಕ ಚಿಂತನೆಯಿಲ್ಲ, ಕೋವಿಡ್ ಸಂದರ್ಭದಲ್ಲಿ ಜಾಗಟೆ ಬಾರಿಸಿ, ದೀಪ ಹಚ್ಚಿ ಎಂದು ಕರೆ ಕೊಟ್ಟರು. ಯಾವ ಮಾನದಂಡಗಳಲ್ಲಿ ಅವರಿಗೆ ಜಾಗತಿಕ ಪಟ್ಟ ನೀಡಿದರೋ ಗೊತ್ತಿಲ್ಲ, ಕೊರೊನಾ ನಿರ್ವಹಣೆಯಲ್ಲಿ ವಿಫಲ ಕಂಡಿದ್ದರ ಕುರಿತು ಅಂತಾರಾಷ್ಟ್ರೀಯ ಪತ್ರಿಕೆಗಳು ಟೀಕಿಸಿದ್ದವು. ಇದುವರೆಗೂ ಪ್ರಧಾನಿಗಳು ಸುದ್ದಿಗೋಷ್ಠಿ ನಡೆಸಿಲ್ಲ, ಪತ್ರಕರ್ತರನ್ನು ಎದುರಿಸುವ ಧೈರ್ಯ ಅವರಿಗಿಲ್ಲ ಎಂದು ವ್ಯಂಗ್ಯವಾಡಿದರು.
ಜ್ಞಾನದ ಕೊರತೆ: ಕಾಂಗ್ರೆಸ್ಸಿಗರಿಗೆ ಸ್ವಾಭಿಮಾನದಿಂದ ದೇಶ ಕಟ್ಟಲು ಇಷ್ಟವಿಲ್ಲ ಎಂಬ ನಳೀನ್ ಕುಮಾರ್ ಕಟೀಲ್ ಹೇಳಿಕೆಗೆ ಪ್ರತಿಕ್ರಿಯಿಸಿ, ಬಿಜೆಪಿ ರಾಜ್ಯಾಧ್ಯಕ್ಷ ಕಟೀಲ್ ಅವರಿಗೆ ಇತಿಹಾಸದ ಅರಿವಿಲ್ಲ, ಜ್ಞಾನದ ಕೊರತೆಯಿಂದ ಹೇಳಿಕೆ ಕೊಡುತ್ತಿದ್ದಾರೆ. ದೇಶದ ಬೆಳವಣಿಗೆ ಬಗ್ಗೆ ಅವರಿಗೆ ಅಜ್ಞಾನವಿದ್ದು, ಯೋಚಿಸಿ ಮಾತನಾಡಬೇಕು ಎಂದು ಹೇಳಿದರು.
ನೂತನ ರಾಷ್ಟ್ರೀಯ ಶಿಕ್ಷಣ ನೀತಿ ಆಗಬಾರದೆಂದು ನಾವು ಹೇಳುತ್ತಿಲ್ಲ. ಸಮಗ್ರವಾಗಿ ಅಧ್ಯಯನ ಆಗಿ ಸಾಧಕ-ಬಾಧಕಗಳನ್ನು ಚರ್ಚಿಸಿ ಜಾರಿಯಾಗಬೇಕು ಆತುರತುರವಾಗಿ ಬೇಡ ಎಂಬುದು ಕಾಂಗ್ರೆಸ್ ನಿಲುವು ಎಂದು ತಿಳಿಸಿದರು. ಇದೇ ವೇಳೆ, ರೈತ ವಿರೋಧಿ ಕೃಷಿ ಕಾಯ್ದೆಗಳ ವಾಪಸಾತಿಗೆ ಕರೆ ನೀಡಿರುವ ಭಾರತ್ ಬಂದ್ ಗೆ ಧ್ರುವನಾರಾಯಣ ಬೆಂಬಲ ವ್ಯಕ್ತಪಡಿಸಿದರು.
ಇದನ್ನೂ ಓದಿ : ಇಂದಿನಿಂದ ಪ್ರಾಥಮಿಕ ಶಾಲೆಗಳ ಪುನಾರಂಭ.. ಎಚ್ಚರ ತಪ್ಪದಿರಿ ಎಂದು ವಿದ್ಯಾರ್ಥಿಗಳಿಗೆ ಸಿಎಂ ಸಲಹೆ