ಕೊಳ್ಳೇಗಾಲ(ಚಾಮರಾಜನಗರ) : ಬೆಳ್ಳಂಬೆಳಗ್ಗೆ ಕೊಳ್ಳೇಗಾಲ ಪಟ್ಟಣದಾದ್ಯಂತ ರೌಂಡ್ಸ್ ಹಾಕಿದ ತಾಲೂಕು ಅಧಿಕಾರಿಗಳು ಕೋವಿಡ್ ನಿಯಮ ಉಲ್ಲಂಘಿಸಿ ವ್ಯಾಪಾರ ನಡೆಸುತ್ತಿದ್ದವರಿಗೆ ದಂಡ ಹಾಕಿ ಬಿಸಿ ಮುಟ್ಟಿಸಿದರು.
ತಹಶೀಲ್ದಾರ್ ಕುನಾಲ್, ನಗರಸಭೆ ಅಧ್ಯಕ್ಷ ವಿಜಯ್ ಹಾಗೂ ಪಟ್ಟಣ ಠಾಣೆಯ ಸಬ್ ಇನ್ಸ್ಪೆಕ್ಟರ್ ತಾಜುವುದ್ದೀನ್ ಜಂಟಿಯಾಗಿ ರಸ್ತೆಗಿಳಿದು ಸಾರ್ವಜನಿಕರಿಗೆ ಕೋವಿಡ್ ಜಾಗೃತಿ ಮೂಡಿಸಿದರು.
ಜೊತೆಗೆ ಅಂಗಡಿ ಸರಕುಗಳನ್ನು ಪಾದಚಾರಿ ಮಾರ್ಗದಲ್ಲಿಟ್ಟು ಮಾರಾಟ ಮಾಡುತ್ತಿದ್ದ ದಿನಸಿ, ತರಕಾರಿ, ಹಾರ್ಡ್‌ವೇರ್ ಅಂಗಡಿ ಮೇಲೆ ದಿಢೀರ್ ದಾಳಿ ನಡೆಸಿ ದಂಡ ಹಾಕಿ ಎಚ್ಚರಿಕೆ ನೀಡಿದರು.
ಟೀ ಅಂಗಡಿ, ಪಾರ್ಕ್ನ ಕಟ್ಟೆಗಳಲ್ಲಿ ಸುಖಾಸುಮ್ಮನೆ ಕಾಲಹರಣ ಮಾಡುತ್ತಾ ಕುಳಿತಿದ್ದವರನ್ನು ಪೊಲೀಸರು ಚದುರಿಸಿದರು. ತಳ್ಳು ಗಾಡಿಯ ವ್ಯಾಪಾರಿಗಳು ಪಟ್ಟಣದ ಪ್ರಮುಖ ರಸ್ತೆಗಳಲ್ಲಿ ನಿಂತು ವ್ಯಾಪಾರ ನಡೆಸಬಾರದು. ಎಂಜಿಎಸ್ವಿ ಮೈದಾನವನ್ನು ವ್ಯಾಪಾರಕ್ಕೆ ಬಳಸಿಕೊಳ್ಳಿ. ಇಲ್ಲವಾದರೆ ಕ್ರಮ ತೆಗೆದುಕೊಳ್ಳಬೇಕಾಗುತ್ತದೆ ಎಂದು ಎಚ್ಚರಿಸಿದರು.
ಅಂತರಕ್ಕೆ ಮಾರ್ಕ್ ಮಾಡಿ : ಸಾಮಾಜಿಕ ಅಂತರವನ್ನು ಅಂಗಡಿ ಮಾಲೀಕರು ಹಾಗೂ ವ್ಯಾಪಾರಸ್ಥರು ಕಡ್ಡಾಯವಾಗಿ ಪಾಲಿಸಬೇಕು. ಪ್ರತಿ ಅಂಗಡಿ ಮುಂದೆ ಅಂತರ ಕಾಯ್ದುಕೊಳ್ಳುವ ಮಾರ್ಕ್ ಮಾಡಬೇಕು. ಜನರು ಅಲ್ಲೆ ನಿಂತು ಅಗತ್ಯ ವಸ್ತು ಖರೀದಿ ಮಾಡಬೇಕು. ಇಲ್ಲವಾದರೆ ದೂರು ದಾಖಲು ಮಾಡಲಾಗುತ್ತೆ ಎಂದು ವಾರ್ನಿಂಗ್ ನೀಡಿದ್ದಾರೆ.
ಇದನ್ನೂ ಓದಿ: ಪಡಿತರಕ್ಕೆ ಫುಲ್ ಡಿಮ್ಯಾಂಡ್: ಕ್ಯೂನಲ್ಲಿ ನಿಲ್ಲುವವರಿಗೆ ಮಂಗಳೂರಿನಲ್ಲಿ ವಿಶೇಷ ವ್ಯವಸ್ಥೆ