ಚಾಮರಾಜನಗರ : ನನಗೆ ಯಡಿಯೂರಪ್ಪ ಅವರ ಮೇಲೆ ಯಾವುದೇ ವೈಯಕ್ತಿಕ ದ್ವೇಷಯಿಲ್ಲ. ಯತ್ನಾಳ್ ಅವರದ್ದು ವೈಯಕ್ತಿಕ ದ್ವೇಷ, ನಾನು ವಿಚಾರ, ಸಮಸ್ಯೆಗಳ ವಿರೋಧಿ ಎಂದು ಕನ್ನಡ ಚಳವಳಿ ವಾಟಾಳ್ ಪಕ್ಷದ ಮುಖ್ಯಸ್ಥ ವಾಟಾಳ್ ನಾಗರಾಜ್ ಹೇಳಿದರು.
ನಗರದ ಚಾಮರಾಜೇಶ್ವರ ದೇಗುಲ ಮುಂಭಾಗ ಪ್ರತಿಭಟಿಸಿದ ಬಳಿಕ ಸುದ್ದಿಗಾರರೊಂದಿಗೆ ಅವರು ಮಾತನಾಡಿ, ಯತ್ನಾಳ್ ಅವರಿಗಿರುವಂತೆ ನನಗೆ ವೈಯಕ್ತಿಕ ದ್ವೇಷವಿಲ್ಲ, ಬಿಎಸ್ವೈ ಮತ್ತು ನಾನು ಇಬ್ಬರು ಸ್ನೇಹಿತರು, ಅಧಿಕಾರದಲ್ಲಿದ್ದಾಗ ಅವರ ನಡೆಗೆ ನನ್ನ ವಿರೋಧವಿತ್ತು.
ಮೃತ ಅಭಿಮಾನಿ ಮನೆಗೆ ಸಾಂತ್ವನ ಹೇಳಲು ಹೆಲಿಕಾಪ್ಟರ್‌ನಲ್ಲಿ ಹೋಗಿದ್ದ ಯಡಿಯೂರಪ್ಪನವರು, ಚಾಮರಾಜನಗರದಲ್ಲಿ 36 ಮಂದಿ ಆಕ್ಸಿಜನ್ ಇಲ್ಲದೇ ಸತ್ತಾಗ ಎಲ್ಲಿ ಹೋಗಿದ್ರು.? ಇಲ್ಲಿನ ಸಾವು ಅವರ ಕಣ್ಣಿಗೆ ಕಾಣಲಿಲ್ಲವೇ, ಆಮ್ಲಜನಕ ದುರಂತದ ತನಿಖೆ ಏನಾಯಿತೆಂದು ಗೊತ್ತಿಲ್ಲ, ಅಧಿಕಾರಿಗಳ ಮೇಲೆ ಕ್ರಮವಿಲ್ಲ ಎಂದು ಆಕ್ರೋಶ ಹೊರ ಹಾಕಿದರು.
ಚಾಮರಾಜನಗರಕ್ಕೆ ಬರಲಿಲ್ಲ, ಇಲ್ಲಿನ ಸಮಸ್ಯೆಗಳಿಗೆ ಪರಿಹಾರ ಕೊಡಲಿಲ್ಲ. ಈಗ ಅಧಿಕಾರದಿಂದ ಇಳಿದಿದ್ದಾರೆ, ಆದ್ದರಿಂದ ಇಂದಿನಿಂದಲೇ ನಾನು ಒಂದಕ್ಷರ ಅವರ ವಿಚಾರ ಮಾತನಾಡುವುದಿಲ್ಲ, ಏನಾದರೂ ಆಗಿರಲಿ ಯಡಿಯೂರಪ್ಪ ಅವರ ಬಗ್ಗೆ ಇನ್ಮುಂದೆ ಮಾತನಾಡಲ್ಲ ಎಂದರು.
ಇದನ್ನೂ ಓದಿ : ಯಡಿಯೂರಪ್ಪ ಎಂಬ ಹೆಸರು - ಶಕ್ತಿ ಸಾಕು..ಅವರಿಗೆ ಸ್ಥಾನಮಾನದ ಅಪೇಕ್ಷೆ ಇಲ್ಲ: ಬಿ.ವೈ ರಾಘವೇಂದ್ರ
ಬೊಮ್ಮಾಯಿ ಚಾಮರಾಜನಗರಕ್ಕೆ ಬರಬೇಕು : ಗಡಿಜಿಲ್ಲೆ ಚಾಮರಾಜನಗರ ಪ್ರಗತಿ ಕುಂಠಿತವಾಗುತ್ತಿದ್ದು, ಸರ್ಕಾರಕ್ಕೆ ಇಲ್ಲೊಂದು ಜಿಲ್ಲೆ ಇದೇ ಅಂಥಾ ಗೊತ್ತಿಲ್ಲ. ಹಿಂದಿನ ಸಿಎಂಗಳು ಚಾಮರಾಜನಗರಕ್ಕೆ ಬರಲಿಲ್ಲ. ಆದರೆ, ಬಸವರಾಜ ಬೊಮ್ಮಾಯಿ ಚಾಮರಾಜನಗರಕ್ಕೆ ಬರಬೇಕು, ಇಲ್ಲೇ ಸಂಪುಟ ಸಭೆ ನಡೆಸಿ ಚಾಮರಾಜನಗರ ಜನರ ಆಸೆ-ಆಕಾಂಕ್ಷೆಗಳನ್ನು ನೆರವೇರಿಸಬೇಕು. ಚಾಮರಾಜನಗರಕ್ಕೆ 5 ಸಾವಿರ ಕೋಟಿ ರೂ. ವಿಶೇಷ ಪ್ಯಾಕೇಜ್ ಕೊಡಬೇಕು ಎಂದು ಅವರು ಒತ್ತಾಯಿಸಿದರು.
ಲಾಕ್ಡೌನ್ ಆಗುವ ಸೂಚನೆ ಇದ್ದು, ಈಗಾಗಲೇ ಜನರು ನೊಂದಿದ್ದಾರೆ. ಒಬ್ಬೊಬ್ಬರದು ಕಣ್ಣೀರಿನ ಕಥೆಯಾಗಿದೆ. ಕೇರಳದಲ್ಲಿ ಸೋಂಕು ಹೆಚ್ಚಾಗುತ್ತಿದ್ದು ರಾಜ್ಯ ಸರ್ಕಾರ ಎಚ್ಚರ ವಹಿಸಿ ವೈರಸ್ ಹಬ್ಬದಂತೆ ಕ್ರಮ ಕೈಗೊಳ್ಳಬೇಕು, ಅಲ್ಲಿ ಸೋಂಕು ಕಡಿಮೆಯಾಗುವ ತನಕ ಗುಂಡ್ಲುಪೇಟೆ ಗಡಿಯನ್ನು ಬಂದ್ ಮಾಡಬೇಕು ಎಂದು ಅವರು ಆಗ್ರಹಿಸಿದರು.