ಚಾಮರಾಜನಗರ: ಕೆರೆ ತುಂಬಿಸುವ ಯೋಜನೆಯಡಿ ಗುಂಡ್ಲುಪೇಟೆ ತಾಲೂಕಿನ ಕಮರಹಳ್ಳಿ ಕೆರೆ ಮೈದುಂಬಿರುವುದರಿಂದ ಸೋಮಹಳ್ಳಿ- ಬೇಗೂರು ಸಂಚಾರ ಸ್ಥಗಿತಗೊಳಿಸಲಾಗಿದೆ.
ಬೇಗೂರು-ಸೋಮಹಳ್ಳಿ ಮಾರ್ಗ ಕನಕಗಿರಿಗೆ ಸಂಪರ್ಕ ಕಲ್ಪಿಸುವ ಸೇತುವೆ ಮೇಲೆ ಕೆರೆಯ ನೀರು ಹರಿಯಲು ಶುರುವಾಗಿದ್ದು, ಸಂಪರ್ಕ ಬಂದ್ ಮಾಡಲಾಗಿದೆ. ಇದರಿಂದಾಗಿ ಸೋಮಹಳ್ಳಿ, ಮರಳಾಪುರ, ಕೊಡಗಾಪುರ, ಕಬ್ಬಹಳ್ಳಿ, ಸೀಗೆವಾಡಿ ಗ್ರಾಮಗಳಿಗೆ ಹೋಗುವ ಮಂದಿ ಪಜೀತಿ ಪಡುವಂತಾಗಿದೆ. ಇನ್ನೂ ಕೆರೆ ಏನಾದರೂ ಪೂರ್ತಿಯಾಗಿ ತುಂಬಿದರೆ ಸ್ಟೇಷನ್‍ನ ಒಳಗೆ ನೀರು ನಿಲ್ಲಲಿದೆ.
ಕೆರೆಯ ನೀರು ತುಂಬಿರುವುದರಿಂದ ವಿದ್ಯುತ್ ವಿತರಣಾ ಕೇಂದ್ರಕ್ಕೇನೂ ತೊಂದರೆಯಾಗುವುದಿಲ್ಲ. ಈ ನಿಟ್ಟಿನಲ್ಲಿ ಎಲ್ಲಾ ಮುಂಜಾಗೃತಾ ಕ್ರಮಗಳನ್ನು ತೆಗೆದುಕೊಳ್ಳಲಾಗಿದೆ ಎಂದು ಸ್ಟೇಷನ್ ಎಂಜಿನಿಯರ್ ತಿಳಿಸಿದ್ದಾರೆ. ಈ ಹಿನ್ನಲೆ ಇನ್ನಾದರೂ ನೂತನ ಸೇತುವೆಯನ್ನು ನಿರ್ಮಿಸಬೇಕೆಂದು ಸಾರ್ವಜನಿಕರು ಒತ್ತಾಯಿಸಿದ್ದಾರೆ.