ಚಾಮರಾಜನಗರ: ನನಗೆ ಮನೆ ಕಟ್ಟಿಕೊಳ್ಳಲು ಆದಷ್ಟು ಬೇಗ ಸರ್ಕಾರ ಹಣ ಕೊಡಬೇಕು, ಸರ್ಕಾರ ವಿಳಂಬ ಮಾಡಬಾರದು ಎಂದು ಜಾನಪದ ಅಕಾಡೆಮಿ ಅಧ್ಯಕ್ಷೆ ಹಾಗೂ ಪದ್ಮಶ್ರೀ ಪ್ರಶಸ್ತಿ ಪುರಸ್ಕೃತೆ ಜೋಗತಿ ಮಂಜಮ್ಮ ಮನವಿ ಮಾಡಿದರು.
ನಗರದಲ್ಲಿ ಈಟಿವಿ ಭಾರತದೊಂದಿಗೆ ಮನದಾಳ ಹಂಚಿಕೊಂಡ ಅವರು, ನನ್ನ ಬಳಿ ಇರುವುದೇ ಗುರುಗಳು ನೀಡಿದ 17x10 ನಿವೇಶನ. ಅದರಲ್ಲಿ ಮನೆ ಕಟ್ಟಲು ಆರಂಭಿಸಿ 3 ವರ್ಷ ಆಗಿದೆ. ಸರ್ಕಾರ ನನ್ನನ್ನು ಇಷ್ಟೆಲ್ಲಾ ಗುರುತಿಸಿದೆ, ಆದರೆ ಮನೆ ಬಿಲ್ ಕೊಡ್ತಾಯಿಲ್ಲ. ಕೂಡಲೇ ಬಿಲ್ ಕೊಡಬೇಕೆಂದು ಅವರು ಒತ್ತಾಯಿಸಿದರು.
ಪದ್ಮಶ್ರೀ ಪ್ರಶಸ್ತಿ ಬರಲಿದೆ ಎಂದು ಕನಸು ಕಂಡಿರಲಿಲ್ಲ. ನನಗೆ ಪದ್ಮಶ್ರೀ ಪ್ರಶಸ್ತಿ ಕೊಟ್ಟ ರೀತಿಯಲ್ಲಿಯೇ ಒಂದು ಎಕರೆ ಜಾಗ ಕೊಟ್ಟು ರಂಗಮಂದಿರ ನಿರ್ಮಿಸಲು ಸಹಾಯ ಮಾಡಬೇಕು. ರಂಗಮಂದಿರದ ಸುತ್ತ ರೂಮುಗಳನ್ನು ಮಾಡಿ ಕಲಾವಿದರು, ಜೋಗತಿಯರಿಗೆ ಉಳಿಯಲು ಅವಕಾಶ ಮಾಡಿಕೊಡುವಂತಾದರೇ ನನ್ನ ಜೀವನ ಸಾರ್ಥಕವಾಗಲಿದೆ ಎಂದು ಅವರು ಮನದಿಂಗಿತ ವ್ಯಕ್ತಪಡಿಸಿದರು.
ಇದೇ ವೇಳೆ, ಭಾರತದಲ್ಲಿ ಕಠಿಣ ಕಾನೂನುಗಳಿದ್ದು ಅತ್ಯಾಚಾರ, ಲೈಂಗಿಕ ದೌರ್ಜನ್ಯದ ಅರಿವು ಈಗೀಗ ಬರುತ್ತಿದೆ. ಲಿಂಗ ಸಮಾನತೆ ಗುಣವೂ ಬೆಳೆಯುತ್ತಿದೆ. ಮಂಗಳಮುಖಿಯರಿಗೆ ಸ್ವಾವಲಂಬಿ ಜೀವನ, ಕಲೆಯ ಬೆಳವಣಿಗೆಗೆ ಸರ್ಕಾರ ಪ್ರೋತ್ಸಾಹ ಕೊಡಬೇಕು. ಅಲ್ಲಿಯವರೆಗೆ, ಭಿಕ್ಷಾಟನೆ ನಿಲ್ಲಿಸಲು ಸಾಧ್ಯವಿಲ್ಲ ಎಂದು ಲಿಂಗ ಸಮಾನತೆ ಕುರಿತ ಪ್ರಶ್ನೆಗೆ ಉತ್ತರಿಸಿದರು.
ಅದ್ದೂರಿಯಾಗಿರಲಿದೆ ಕಾರ್ಯಕ್ರಮ:
ಬಳ್ಳಾರಿಯಲ್ಲಿ ನಾನು ಜಾನಪದ ಅಕಾಡೆಮಿ ಪ್ರಶಸ್ತಿ ಪ್ರದಾನ ಕಾರ್ಯಕ್ರಮ ಮಾಡಬೇಕೆಂದುಕೊಂಡಿದ್ದೆ. ಆದರೆ, ಇಲ್ಲಿನ ಕಲಾವಿದರ ಒತ್ತಡದಿಂದ ಜಾನಪದದ ತವರೂರು ಚಾಮರಾಜನಗರದಲ್ಲಿ ಕಾರ್ಯಕ್ರಮ ನಡೆಯುತ್ತಿದೆ, ಇಲ್ಲಿನ ಪ್ರತಿಕ್ರಿಯೆ ಕಂಡು ಕಾರ್ಯಕ್ರಮ ಅದ್ಭುತವಾಗಿ, ಅದ್ಧೂರಿಯಾಗಿರಲಿದೆ ಎಂಬ ವಿಶ್ವಾಸ ನನ್ನದಾಗಿದೆ ಎಂದು ತಿಳಿಸಿದರು.
ನನ್ನ ಕುಟುಂಬ ನನ್ನೊಂದಿಗೆ ಚೆನ್ನಾಗಿದ್ದು ನನ್ನನ್ನು ಒಪ್ಪಿಕೊಂಡಿದ್ದಾರೆ. ಮಂಗಳಮುಖಿಯರಿಗಿಂತ ಹೆಚ್ಚು ಯುವ ಜನರು ಜೋಗತಿ ಕುಣಿತ ಕಲಿಯುತ್ತಿದ್ದಾರೆ, ತಂತ್ರಜ್ಞಾನವೂ ಸಹಾಯಕವಾಗಿದೆ. ನಾನು ಗಂಡಿನಿಂದ ಹೆಣ್ಣಾಗಿ ಪರಿವರ್ತನೆ ಆಗಿದ್ದು ಆರಂಭದಲ್ಲಿ ಶಾಪ ಎಂದುಕೊಂಡಿದ್ದೆ. ಈಗ ಜೀವನ ಒಂದು ದಿಕ್ಕಿನತ್ತ ಸಾಗುವಾಗ ನಾನು ಪುಣ್ಯ ಮಾಡಿದ್ದೇನೆ ಎಂದೆನಿಸುತ್ತಿದೆ ಎಂದು ಅವರು ಈಟಿವಿ ಭಾರತದೊಂದಿಗೆ ತಮ್ಮ ಅಭಿಪ್ರಾಯ ಹಂಚಿಕೊಂಡರು.
ಭಾನುವಾರ ಜಾನಪದ ಅಕಾಡೆಮಿ ವಾರ್ಷಿಕ ಪ್ರಶಸ್ತಿ ಪ್ರದಾನ... ಚಾ.ನಗರದಲ್ಲಿ ಸಕಲ ಸಿದ್ಧತೆ