ಚಾಮರಾಜನಗರ: ಬಡವರು, ನಿರ್ಗತಿಕರಿಗೆ ವರದಾನವಾಗಿದ್ದ ಇಂದಿರಾ ಕ್ಯಾಂಟೀನ್, ಈಗ ಲಾಕ್ಡೌನ್ ಅವಧಿಯಲ್ಲೂ ಸಾರ್ಥಕ ಕಾರ್ಯಕ್ಕೆ ಮುಂದಾಗಿದ್ದು, ಇಂದಿನಿಂದ ಉಚಿತ ಊಟ ವಿತರಿಸುತ್ತಿದೆ.
ಹೌದು, ಮೇ 11 ರಿಂದ 24 ರವರೆಗೆ ಇಂದಿರಾ ಕ್ಯಾಂಟೀನ್ಗಳಲ್ಲಿ ಉಚಿತ ಆಹಾರ ವಿತರಿಸುವಂತೆ ಪೌರಾಡಳಿತ ನಿರ್ದೇಶಕರ ಸೂಚನೆಯಂತೆ ಇಂದಿನಿಂದ ಜಿಲ್ಲೆಯ 4 ಕ್ಯಾಂಟೀನ್ಗಳಲ್ಲೂ ಉಚಿತ ಆಹಾರ ವಿತರಿಸಲಾಗುತ್ತಿದ್ದು, ಫಲಾನುಭವಿಗಳಿಂದ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗಿದೆ.
ಲಾಕ್ಡೌನ್ ಅವಧಿಯಲ್ಲಿ ಕೂಲಿ ಕಾರ್ಮಿಕರು, ನಿರ್ಗತಿಕರು ಹಾಗೂ ಬಡವರು ಊಟಕ್ಕಾಗಿ ಪರದಾಡುವ ಸ್ಥಿತಿ ಇದರಿಂದ ಶಮನವಾಗಿದೆ. ಆಸ್ಪತ್ರೆಗೆ ಬರುವ ರೋಗಿಗಳ ಸಂಬಂಧಿಕರಿಗೂ ಇಂದಿರಾ ಕ್ಯಾಂಟೀನ್ ಆಸರೆಯಾಗಿದ್ದು, ಇಂದು ಬೆಳಗ್ಗೆ 625 ಮಂದಿಗೆ ಉಪಹಾರ, ಮಧ್ಯಾಹ್ನ 700 ಮಂದಿಗೆ ಊಟ ವಿತರಿಸಲಾಗಿದೆ. ಪಾರ್ಸೆಲ್ಗೆ ಅನುಕೂಲವಾಗಲೆಂದು ದಿನದ ಮೂರು ಹೊತ್ತು ಕೂಡ ವಿವಿಧ ಬಗೆಯ ರೈಸ್ ಬಾತ್ಗಳನ್ನೂ ವಿತರಿಸಲಾಗುತ್ತಿದೆ.
ಕಳೆದ ವರ್ಷದ ಲಾಕ್ಡೌನ್ ಅವಧಿಯಲ್ಲೂ ಎಲ್ಲಾ ಹೋಟೆಲ್, ಫಾಸ್ಟ್ ಫುಡ್ ಬಂದಾಗಿದ್ದರಿಂದ ಹಸಿದವರಿಗೆ ಇಂದಿರಾ ಕ್ಯಾಂಟೀನ್ ಒಂದೇ ಆಧಾರವಾಗಿ ಬರೋಬ್ಬರಿ 1.40 ಲಕ್ಷ ಊಟ ವಿತರಿಸಿ ಗಮನ ಸೆಳೆದಿತ್ತು. 6 ಸಾವಿರ ಊಟವನ್ನು ನಿರ್ಗತಿಕರಿಗೆ ಉಚಿತವಾಗಿ ವಿತರಿಸಲಾಗಿತ್ತು.