ಚಾಮರಾಜನಗರ: ಅಕ್ರಮವಾಗಿ ಕಾಡೊಳಗೆ ನುಸುಳಿ ಮಾಕಳಿ ಬೇರು ಸಂಗ್ರಹಿಸುತ್ತಿದ್ದ 6 ಮಂದಿಯನ್ನು ಅರಣ್ಯ ಇಲಾಖೆ ಅಧಿಕಾರಿಗಳು ಬಂಧಿಸಿರುವ ಘಟನೆ ಹನೂರು ತಾಲೂಕಿನ ಬಿಜ್ಜಲಾನೆ ಬಳಿಯ ಅರಣ್ಯ ಪ್ರದೇಶದಲ್ಲಿ ನಡೆದಿದೆ.
ಹನೂರು ತಾಲೂಕಿನ ಆಲಂಬಾಡಿ ಗ್ರಾಮದ ಕುಟ್ಟಿ, ಬಿಳಿಗುಂಡ್ಲ ಗ್ರಾಮದ ಅರುಲ್, ಚಾರ್ಲಿಸ್, ಬಾಲ, ಮೇರಿ ಹಾಗೂ ತೆರೇಸಾ ಬಂಧಿತರು. ಕಾವೇರಿ ವನ್ಯಜೀವಿ ಧಾಮದ ಕೌದಳ್ಳಿ ಅರಣ್ಯ ವಲಯದ ಬಿಜ್ಜಲಾನೆ ಗಸ್ತಿನಲ್ಲಿ ಮಾಕಳಿ ಬೇರನ್ನು ಸಂಗ್ರಹಿಸುತ್ತಿದ್ದಾಗ ಅಧಿಕಾರಿಗಳು ಬಂಧಿಸಿದ್ದಾರೆ. ಆರೋಪಿಗಳು 2 ಉರುಳು ಹಾಕಿ ಹೊಂಚು ಹಾಕಿದ್ದರು ಎನ್ನಲಾಗಿದೆ.
ಬಂಧಿತರಿಂದ 35 ಕೆಜಿಯಷ್ಟು ಮಾಕಳಿ ಬೇರು, ಉರುಳು, ಮಚ್ಚುಗಳನ್ನು ವಶಪಡಿಸಿಕೊಂಡು ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿದೆ.