ಚಾಮರಾಜನಗರ: ಇದ್ದರೂ ಸುಖವಿಲ್ಲ-ಸತ್ತಾಗಲೂ ಸುಖವಿಲ್ಲ ಎಂಬುದಕ್ಕೆ ಈ ಬಡಕುಟುಂಬವೇ ಸಾಕ್ಷಿ. ಶವ ಸಂಸ್ಕಾರಕ್ಕೂ ಹಣವಿಲ್ಲದೇ ಪತ್ನಿಯ ಶವವನ್ನು ಮೂಟೆಯಲ್ಲಿ ತುಂಬಿಕೊಂಡು ಹೊತ್ತೊಯ್ದಿರುವ ಹೃದಯವಿದ್ರಾವಕ ಘಟನೆ ಯಳಂದೂರು ಪಟ್ಟಣದಲ್ಲಿ ನಡೆದಿದೆ.
ಮಂಡ್ಯ ಮೂಲದ ಕಾಳಮ್ಮ(26) ಎಂಬುವರು ಮೃತಪಟ್ಟಿದ್ದು, ಅವರ ಪತಿ ರವಿ ಮೂಟೆಯಲ್ಲಿ ಶವ ಸಾಗಿಸುವಾಗ ಪೊಲೀಸರು ಮಧ್ಯಪ್ರವೇಶಿಸಿದ್ದಾರೆ. ಯಳಂದೂರು ಪಟ್ಟಣದ ಅರಣ್ಯ ಇಲಾಖೆ ಕಚೇರಿ ಹತ್ತಿರ ಇರುವ ಆಲೆಮನೆಯಲ್ಲಿ ಕಳೆದ 15 ದಿನಗಳಿಂದ ರವಿ ಮತ್ತು ಆತನ ಹೆಂಡತಿ ಕಾಳಮ್ಮ ಪ್ಲಾಸ್ಟಿಕ್, ಗುಜರಿ ಸಾಮಗ್ರಿಗಳನ್ನು ಸಂಗ್ರಹಿಸಿ ಮಾರಾಟ ಮಾಡುತ್ತ ಜೀವನ ಸಾಗಿಸುತ್ತಿದ್ದರು.
ಅನಾರೋಗ್ಯದಿಂದ ಬಳಲುತ್ತಿದ್ದ ಕಾಳಮ್ಮ ಮಂಗಳವಾರ ರಾತ್ರಿ ಮೃತಪಟ್ಟಿದ್ದರು. ಆಕೆಯನ್ನು ಕಳೆದುಕೊಂಡು ನೋವಿನಲ್ಲಿದ್ದ ಪತಿಗೆ ಅಂತ್ಯಸಂಸ್ಕಾರಕ್ಕೆ ಹಣ ಹೊಂದಿಸುವುದು ಹೇಗೆಂದು ದಿಕ್ಕು ತೋಚದೆ ಶವವನ್ನು ತನ್ನ ಹೆಗಲ ಮೇಲೆ ಹೊತ್ತುಕೊಂಡು ಪಟ್ಟಣದ ಸುವರ್ಣವತಿ ನದಿ ಕಡೆ ಅಂತ್ಯ ಸಂಸ್ಕಾರ ಮಾಡಲು ತೆರಳಿದ್ದ. ಈ ವೇಳೆ ಮಾಹಿತಿ ತಿಳಿದು ಸ್ಥಳಕ್ಕೆ ಬಂದ ಪೊಲೀಸರು ಆತನಿಂದ ಹೇಳಿಕೆ ಪಡೆದು ಶವವನ್ನು ಜಿಲ್ಲಾಸ್ಪತ್ರೆಯ ಶವಾಗಾರದಲ್ಲಿ ಪರೀಕ್ಷೆಗೆ ಕಳುಹಿಸಿಕೊಟ್ಟಿದ್ದಾರೆ.
ಶವ ಪರೀಕ್ಷೆ ಬಂದ ನಂತರ ಸೂಕ್ತ ಕ್ರಮ ಕೈಗೊಳ್ಳುವುದಾಗಿ ಪಿಎಸ್ಐ ತಿಳಿಸಿದ್ದಾರೆ. ಯಳಂದೂರು ಠಾಣಾ ವ್ಯಾಪ್ತಿಯಲ್ಲಿ ಈ ಘಟನೆ ನಡೆದಿದೆ.
ಇದನ್ನೂ ಓದಿ: ಕಲಬುರಗಿಯಲ್ಲಿ ಹಳಿ ದಾಟುವಾಗ ಗೂಡ್ಸ್ ರೈಲಿಗೆ ಸಿಲುಕಿದ ತಾಯಿ-ಮಗ.. ಕೂದಲೆಳೆ ಅಂತರದಲ್ಲಿ ಪಾರು- ವಿಡಿಯೋ