ಚಾಮರಾಜನಗರ : ಮೈಸೂರು ದಸರಾ ಪ್ರಯುಕ್ತ ಚಾಮರಾಜನಗರ ತಾಲೂಕಿನ ಸಿದ್ದಯ್ಯನಪುರ ಗ್ರಾಮದಲ್ಲಿಂದು ಗ್ರಾಮ ನಿರ್ಮಾತೃಗಳಾದ ಜಯಚಾಮರಾಜ ಒಡೆಯರ್ ಭಾವಚಿತ್ರವನ್ನು ಅದ್ದೂರಿ ಮೆರವಣಿಗೆ ನಡೆಸಿ ವಿಶೇಷ ಪೂಜೆ ಸಲ್ಲಿಸಿದ್ದಾರೆ.
ವಿಜಯ ದಶಮಿ ಬಂತೆಂದರೆ ನೆನಪುವಾಗುವುದು ನಾಡಹಬ್ಬ ದಸರಾ. ಆದರೆ, ಈ ಗ್ರಾಮದ ಜನರು ಮಾತ್ರ ಪ್ರತಿ ವರ್ಷ ವಿಜಯ ದಶಮಿ ದಿನದಂದು ಮೈಸೂರಿನ ಮಹಾರಾಜರಾದ ಜಯಚಾಮರಾಜ ಒಡೆಯರ್, ಮಾಜಿ ರಾಜ್ಯಪಾಲ ಬಿ. ರಾಚಯ್ಯ ಅವರ ಭಾವಚಿತ್ರವನ್ನು ಮೆರವಣಿಗೆ ಮಾಡುವ ಸಂಪ್ರದಾಯ ರೂಢಿಸಿಕೊಂಡು ಬಂದಿದ್ದಾರೆ.
ಸ್ವಾವಲಂಬಿ ಬದುಕಿಗೆ ದಾರಿ- ಮೆರವಣಿಗೆ ಮಾಡುವ ಮೂಲಕ ಕೃತಜ್ಞತೆ
1957ರಲ್ಲಿ ಜಯಚಾಮರಾಜ ಒಡೆಯರ್ ಅವರು ಒಂದು ಸಾವಿರಕ್ಕೂ ಹೆಚ್ಚು ಎಕರೆ ಅರಣ್ಯ ಭೂಮಿಯಲ್ಲಿ ಕೃಷಿ ಮಾಡಲು ಅವಕಾಶ ಮಾಡಿಕೊಟ್ಟು, ಬಡವರಿಗೆ ಜಮೀನು ಹಂಚಿಕೆ ಮಾಡಿದ್ದರು.
ಅಂದು ಅರಣ್ಯ ಸಚಿವರಾಗಿದ್ದ, ಮಾಜಿ ರಾಜ್ಯಪಾಲ ಬಿ. ರಾಚಯ್ಯ ಅವರು ಸಿದ್ದಯ್ಯನಪುರ ಸೇರಿದಂತೆ 16 ಕಾಲೋನಿಗಳನ್ನು ನಿರ್ಮಾಣ ಮಾಡುವ ಮೂಲಕ ಈ ಭಾಗದಲ್ಲಿ ದಲಿತರು ಹಾಗೂ ಹಿಂದುಳಿದವರು ಮತ್ತು ಬಡವರು ಭೂ ಮಾಲೀಕರಾಗಿ ಕೃಷಿಯಲ್ಲಿ ತೊಡಗಿಸಿಕೊಂಡು ಸ್ವಾವಲಂಬನೆಯಿಂದ ಜೀವನ ರೂಪಿಸಿಕೊಟ್ಟಿದ್ದರು.
ಉತ್ತಮ ಬದುಕಿಗೆ ಕಾರಣಕರ್ತರಾದ ನೆನಪಿಗೆ ಪ್ರತಿವರ್ಷ ಗ್ರಾಮಸ್ಥರು ವಿಜಯ ದಶಮಿ ದಿನದಂದು ಸರ್ವಾಲಂಕೃತ ಎತ್ತಿನ ಗಾಡಿಯಲ್ಲಿ ಜಯಚಾಮರಾಜ ಒಡೆಯರ್, ಬಿ. ರಾಚಯ್ಯ ಅವರ ಭಾವಚಿತ್ರವಿಟ್ಟು ಮಂಗಳವಾದ್ಯ ಸಮೇತದೊಂದಿಗೆ ಮೆರವಣಿಗೆ ಮಾಡಿ ಪೂಜೆ ಸಲ್ಲಿಸುವ ಮೂಲಕ ಕೃತಜ್ಞತೆ ಸಲ್ಲಿಸುತ್ತಾರೆ.
ಇದನ್ನೂ ಓದಿ: ವಿದ್ಯುತ್ ದೀಪಾಲಂಕಾರ ಇನ್ನೂ ಒಂಬತ್ತು ದಿನಕ್ಕೆ ವಿಸ್ತರಣೆ : ಸಿಎಂ ಬಸವರಾಜ ಬೊಮ್ಮಾಯಿ