ಚಾಮರಾಜನಗರ: ಪ್ರವಾಸಿಗರ ಹಾಟ್‌ಸ್ಪಾಟ್ ಎಂದೇ ಗುರುತಿಸಿಕೊಂಡಿರುವ ಚಾಮರಾಜನಗರದಲ್ಲಿ ಹೋಟೆಲ್ ಉದ್ಯಮ ಚೇತರಿಕೆ ಕಾಣುವ ಲಕ್ಷಣಗಳೇ ಗೋಚರಿಸುತ್ತಿಲ್ಲ.
ಜಿಲ್ಲೆಯ ಪ್ರಮುಖ ತಾಣಗಳಾದ ಮಲೆಮಹದೇಶ್ವರ ಬೆಟ್ಟ, ಬಂಡೀಪುರ, ಹಿಮವದ್ ಗೋಪಾಲಸ್ವಾಮಿ ಬೆಟ್ಟ, ಬಿಳಿಗಿರಿರಂಗನಾಥ ಬೆಟ್ಟ ಹೀಗೆ ಸಾಲು ಸಾಲು ಪ್ರವಾಸಿ ಸ್ಥಳಗಳಿಗೆ ಸ್ಥಳೀಯ ಜನರ ಸಂಖ್ಯೆಯಷ್ಟೇ ದಿನದಿಂದ ದಿನಕ್ಕೆ ಹೆಚ್ಚಾಗುತ್ತಿದ್ದು, ಹೋಟೆಲ್ ಕಡೆ ಮುಖ ಮಾಡುವವರು, ಉಳಿಯುವವರ ಸಂಖ್ಯೆ ತೀರಾ ಕಡಿಮೆಯಾಗಿದೆ.
ಕೊರೊನಾ ಏಟಿಗೆ ತತ್ತರಿಸಿದ ಹೋಟೆಲ್ ಉದ್ಯಮ ಮೈಸೂರು ದಸರಾಗೆ ಬಂದವರು ಚಾಮರಾಜನಗರ ಜಿಲ್ಲೆಗೆ ಭೇಟಿ ಕೊಟ್ಟು ಉಳಿದುಕೊಳ್ಳುತ್ತಿದ್ದರು. 15-20 ದಿನಗಳ ಹಿಂದೆ ಬುಕ್ ಮಾಡಿದ್ದರಷ್ಟೇ ರೂಂ ಸಿಗುವುದು ಎಂಬ ವಾತಾವರಣ ಮರೆಯಾಗಿ ಪ್ರವಾಸಿಗರು ಬಂದರೆ ಸಾಕೆಂಬ ಸ್ಥಿತಿಗೆ ಹೋಟೆಲ್ ಉದ್ಯಮ ಬಂದು ನಿಂತಿದೆ. ಹೋಟೆಲ್ ಉದ್ಯಮಿಗಳು ಕೊರೊನಾ ಹೊಡೆತದಿಂದ ಶೇ. 70 ರಷ್ಟು ನಷ್ಟ ಅನುಭವಿಸುತ್ತಿದ್ದಾರೆ.ದಿನಕ್ಕೆ 1 ಲಕ್ಷ ಖೋತಾ:
ಹನೂರು ತಾಲೂಕಿನ ಮಲೆಮಹದೇಶ್ವರ ಬೆಟ್ಟದಲ್ಲಿ ಭಕ್ತರಿಗೆ ಇನ್ನೂ ವಾಸ್ತವ್ಯಕ್ಕೆ ಅವಕಾಶ ನೀಡದಿರುವುದರಿಂದ ದಿನವೊಂದಕ್ಕೆ ಪ್ರಾಧಿಕಾರ ದಿನವೊಂದಕ್ಕೆ 1 ಲಕ್ಷ ರೂ. ನಷ್ಟ ಅನುಭವಿಸುತ್ತಿದೆ.
ಈ ಕುರಿತು ಪ್ರಾಧಿಕಾರದ ಕಾರ್ಯದರ್ಶಿ ಜಯವಿಭವಸ್ವಾಮಿ ಮಾತನಾಡಿ, ನಾಗಮಲೆ ಭವನ, ಶೈಲಭವನ, ಸೂರ್ಯದರ್ಶಿನಿ, ಗಿರಿದರ್ಶಿನಿ ಸೇರಿದಂತೆ 9 ಗೆಸ್ಟ್ ಹೌಸ್ ಗಳು, 1 ಡಾರ್ಮೆಟರಿ ಇದ್ದು ಮಾ.20 ರಿಂದ ಬಂದ್ ಆಗಿದ್ದು ಸರಾಸರಿ ದಿನಕ್ಕೆ 1 ಲಕ್ಷ ನಷ್ಟ ಆಗುತ್ತಿದೆ. ಒಟ್ಟಾರೆ ಆದಾಯದಲ್ಲೂ ಭಾರಿ ಇಳಿಮುಖವಾಗಿದೆ ಎಂದರು.
ಪ್ರತಿ ತಿಂಗಳು 7 ಕೋಟಿ ರೂ. ಆದಾಯ ಆಗಬೇಕು. ಆದರೆ, ಈಗ 50 ಲಕ್ಷ ರೂ. ಬರುವಂತಾಗಿದೆ. ಉತ್ಸವಗಳ ಆದಾಯವೇ 8-10 ಕೋಟಿ ಇರುತ್ತಿತ್ತು. ಈ ವರ್ಷ 1 ಕೋಟಿಯೂ ಬರುವುದಿಲ್ಲ, ಭಕ್ತರ ಸಂಖ್ಯೆಯೂ ಕಡಿಮೆ ಎಂದು ಮಾಹಿತಿ ನೀಡಿದರು.
ಬಾಡಿಗೆ, ವಿದ್ಯುತ್ ಬಿಲ್ ಕೂಡ ಕಟ್ಟಲಾಗಲ್ಲ:
ಗುಂಡ್ಲುಪೇಟೆಯ ರಾಷ್ಟ್ರೀಯ ಹೆದ್ದಾರಿಯಲ್ಲಿರುವ ಹೋಟೆಲ್ ಗುರುಪ್ರಸಾದ್‌ನ ಮಾಲೀಕರಾದ ಶ್ರೀನಿವಾಸರಾವ್ ಅವರು ಕೊರೊನಾ ಸಂಕಷ್ಟದ ಕುರಿತು ಪ್ರತಿಕ್ರಿಯಿಸಿ, ಕೊರೊನಾ ಮುಂಚಿನ ವ್ಯಾಪಾರಕ್ಕೆ ಹೋಲಿಸಿದರೆ ಶೇ. 20 ರಷ್ಟು ಈಗಿಲ್ಲ, 34 ನೌಕರರಿದ್ದ ನನ್ನ ಹೋಟೆಲಿನಲ್ಲಿ ಕೇವಲ 8 ಮಂದಿ ಈಗ ಇದ್ದಾರೆ. ಬಾಡಿಗೆ, ವಿದ್ಯುತ್ ಬಿಲ್ ಕೂಡ ಕೈಯಿಂದ ಹಾಕಬೇಕಾದ ಸ್ಥಿತಿ ನಿರ್ಮಾಣವಾಗಿದೆ ಎಂದರು. ಈ ಡಿಸೆಂಬರ್ ತನಕ ಬಾಡಿಗೆಯಲ್ಲಿ ರಿಯಾಯಿತಿ ಸಿಕ್ಕಿದೆ. ಶೇ. 80 ರಷ್ಟು ಪ್ರವಾಸಿಗರನ್ನೇ ನೆಚ್ಚಿಕೊಂಡಿದ್ದ ಹೋಟೆಲ್ ನಮ್ಮದಾಗಿದ್ದು 5-6 ರೂಂಗಳು ಬುಕ್ ಆಗುವುದು ದೊಡ್ಡದಾಗಿದೆ. ಕಳೆದ ದಸರಾದಲ್ಲಿ ಪ್ರವಾಸಿಗರು ನಮ್ಮ ಹೋಟೆಲಿನಲ್ಲಿ ತುಂಬಿ ತುಳುಕುತ್ತಿದ್ದರು. ಕೇರಳ, ತಮಿಳುನಾಡಿನಿಂದಲೂ ಜನರು ಬರುತ್ತಿಲ್ಲ. ನೋಟ್ ರದ್ದಾದಾಗಲೂ ಈ ಪಾಟಿ ವ್ಯಾಪಾರ ಡಲ್ ಆಗಿರಲಿಲ್ಲ, ಸರ್ಕಾರ ಹೋಟೆಲ್ ಮಾಲೀಕರ ನೆರವಿಗೆ ಬರಬೇಕೆಂದು ಮನವಿ ಮಾಡಿದರು.
ವೀಕೆಂಡ್ಗಷ್ಟೇ ಸೀಮಿತ: ವಾರಾಂತ್ಯದಲ್ಲಷ್ಟೇ ಶೇ. 40-50 ರಷ್ಟು ಪ್ರವಾಸಿಗರು ಬರುತ್ತಿದ್ದು ಉದ್ಯಮ ಚೇತರಿಕೆಯಾಗಿಲ್ಲ. ಹೋಟೆಲ್ ಬುಕ್ ಮಾಡಿದರಷ್ಟೇ ಸಿಗಲಿದೆ ಎಂಬ ಪರಿಸ್ಥಿತಿ ಮರೆಯಾಗಿದೆ. ಈಜುಕೊಳವನ್ನು ನೀಡುತ್ತಿಲ್ಲ. ಉತ್ತರ ಭಾರತ, ಅನ್ಯರಾಜ್ಯದ ಪ್ರವಾಸಿಗರಂತೂ ಇಲ್ಲವೇ ಇಲ್ಲ, ಬೆಂಗಳೂರಿನವರು ಬರುತ್ತಿರುವುದರಿಂದಷ್ಟೇ ವ್ಯಾಪಾರ. ಪ್ರಸ್ತುತ ಶೇ.70 ರಷ್ಟು ಬಿಸಿನೆಸ್ ಕಡಿಮೆಯಾಗಿದೆ 20-25 ರೂಂಗಳಷ್ಟೇ ಬುಕ್ ಆಗ್ತಾ ಇದೆ ಎಂದು ಬಂಡೀಪುರ ಕಂಟ್ರಿ ಕ್ಲಬ್ ರೆಸಾರ್ಟ್‌ನ ಜನರಲ್ ಮ್ಯಾನೇಜರ್ ಗುರುರಾಜ ಆಚಾರ್ಯ ಹೇಳಿದರು.
15 ಸಾವಿರ ಪ್ರವಾಸಿಗರ ವಾಸ್ತವ್ಯ: ಅನ್‌ಲಾಕ್ ಆದ ಬಳಿಕ ರಾಜ್ಯದ ಜಂಗಲ್ ಲಾಡ್ಜ್‌ಗಳಲ್ಲಿ 15 ಸಾವಿರ ಮಂದಿ ಪ್ರವಾಸಿಗರು ವಾಸ್ತವ್ಯ ಮಾಡಿದ್ದಾರೆ. ದಿನಕಳೆದಂತೆ ನಮಗೆ ಚೇತರಿಕೆ ಕಾಣುತ್ತಿದೆ ಎಂದು ಜಂಗಲ್ ಲಾಡ್ಜ್‌ನ ಎಂಡಿ ವಿಜಯಶರ್ಮ ಈಟಿವಿ ಭಾರತಕ್ಕೆ ತಿಳಿಸಿದ್ದಾರೆ. ಜಿಲ್ಲೆಯ ಬಹುತೇಕ ಲಾಡ್ಜ್, ಹೋಟೆಲ್, ರೆಸಾರ್ಟ್‌ಗಳು ನಷ್ಟದ ಹಾದಿ ತುಳಿದಿದ್ದು, ಬೇರೆ ಉದ್ಯಮಕ್ಕೆ ಹೋಗಲಾಗದೇ ಇರುವ, ಉದ್ಯಮ ನಡೆಸಲಾಗದ ಸಂದಿಗ್ಧ ಸ್ಥಿತಿಯಲ್ಲಿ ಮಾಲೀಕರಿದ್ದು, ಕೊರೊನಾ ಮಹಾಮಾರಿ ದೊಡ್ಡ ಪೆಟ್ಟನ್ನೇ ನೀಡಿದೆ.