ಬೆಂಗಳೂರು : ಚಾಮರಾಜನಗರ ಜಿಲ್ಲೆಯ ಯರಗಂಬಳ್ಳಿ ಗ್ರಾಮದಲ್ಲಿ ನಡೆಯುತ್ತಿರುವ ಕಲ್ಲು ಗಣಿಗಾರಿಕೆಗೆ ಹೈಕೋರ್ಟ್ ತಡೆಯಾಜ್ಞೆ ನೀಡಿ ಆದೇಶಿಸಿದೆ. ಈ ಕುರಿತು ಎಂ.ಸಮೀವುಲ್ಲಾ ಎಂಬುವರು ಸಲ್ಲಿಸಿರುವ ಸಾರ್ವಜನಿಕ ಹಿತಾಸಕ್ತಿ ಅರ್ಜಿ ವಿಚಾರಣೆ ನಡೆಸಿದ ಹಂಗಾಮಿ ಸಿಜೆ ಸತೀಶ್ ಚಂದ್ರ ಶರ್ಮಾ ನೇತೃತ್ವದ ವಿಭಾಗೀಯ ಪೀಠ ಈ ಆದೇಶ ಮಾಡಿದೆ.
ಪ್ರಕರಣಕ್ಕೆ ಸಂಬಂಧಿಸಿದಂತೆ ಈ ಹಿಂದೆ ಸ್ಥಳ ಪರಿಶೀಲನೆ ನಡೆಸಿದ್ದ ಗಣಿ ಮತ್ತು ಭೂ ವಿಜ್ಞಾನ ಇಲಾಖೆ ಉಪ ನಿರ್ದೇಶಕರು ಹೈಕೋರ್ಟ್‌ಗೆ ವರದಿ ಸಲ್ಲಿಸಿ, ಯರಗಂಬಳ್ಳಿ ಗ್ರಾಮದಲ್ಲಿ ಕಲ್ಲು ಗಣಿಗಾರಿಕೆ ನಡೆಯುತ್ತಿರುವ ಪ್ರದೇಶದಿಂದ ನೀರು ಹರಿಸುವ ಕಾಲುವೆ 60 ಮೀಟರ್ ದೂರಲ್ಲಿದೆ ಎಂದು ತಿಳಿಸಿದ್ದರು.
ಅದನ್ನು ಆಕ್ಷೇಪಿಸಿದ್ದ ಅರ್ಜಿದಾರ ಪರ ವಕೀಲರು, ನೀರು ಹರಿಸುವ ಕಾಲುವೆಯು ಗಣಿಗಾರಿಕೆಯ ಪ್ರದೇಶದಿಂದ ಕೇವಲ 20 ಮೀಟರ್ ದೂರದಲ್ಲಿದೆ. ಉಪ ನಿರ್ದೇಶಕರು ಸುಳ್ಳು ವರದಿ ಸಲ್ಲಿಸಿದ್ದಾರೆ. ಹಾಗಾಗಿ, ಸ್ಥಳ ಪರಿಶೀಲನೆ ನಡೆಸಲು ಕೋರ್ಟ್ ಕಮಿಷನರ್ ನೇಮಕ ಮಾಡಬೇಕು ಎಂದು ಕೋರಿದ್ದರು. ಅದರಂತೆ ಹೈಕೋರ್ಟ್, ವಕೀಲ ಮಿಶಾ ಥಾಮಸ್ ಅವರನ್ನು ಕೋರ್ಟ್ ಕಮಿಷನರ್ ಆಗಿ ನೇಮಕ ಮಾಡಿ ಸೆ.9ರಂದು ಆದೇಶಿಸಿತ್ತು.
ಹೈಕೋರ್ಟ್ ನಿರ್ದೇಶನದಂತೆ ಸಂಬಂಧಪಟ್ಟ ಅಧಿಕಾರಿಗಳೊಂದಿಗೆ ಸ್ಥಳಪರಿಶೀಲನೆ ನಡೆಸಿದ್ದ ಕೋರ್ಟ್ ಕಮಿಷನರ್ ಮಿಶಾ ಥಾಮಸ್, ಕಲ್ಲು ಗಣಿಗಾರಿಕೆ ನಡೆಯುತ್ತಿರುವ ಪ್ರದೇಶದಿಂದ ನೀರು ಹರಿಸುವ ಕಾಲುವೆಯು 20 ಮೀಟರ್ ಒಳಗಿದೆ ಎಂದು ವರದಿಯಲ್ಲಿ ತಿಳಿಸಿದರು.
ವರದಿ ಪರಿಗಣಿಸಿದ ಪೀಠ, ಅರ್ಜಿಯ ಮುಂದಿನ ವಿಚಾರಣೆವರೆಗೆ ಯರಗಂಬಳ್ಳಿ ಗ್ರಾಮದಲ್ಲಿ ನಡೆಸುತ್ತಿರುವ ಕಲ್ಲು ಗಣಿಗಾರಿಕೆ ಚಟುವಟಿಕೆಗಳನ್ನು ನಿಲ್ಲಿಸಬೇಕು ಎಂದು ತಡೆಯಾಜ್ಞೆ ಆದೇಶ ನೀಡಿ, ವಿಚಾರಣೆ ಮುಂದೂಡಿತು. ಜತೆಗೆ, ಕೋರ್ಟ್ ಕಮಿಷನರ್ ವರದಿಗೆ ಪ್ರತಿಕ್ರಿಯಿಸುವಂತೆ ಗಣಿಗಾರಿಕೆ ನಡೆಸುತ್ತಿರುವ ಕರಿಕಲ್ಲು ನಂಜಶೆಟ್ಟಿ ಅವರ ಪರ ವಕೀಲರಿಗೆ ನಿರ್ದೇಶಿಸಿತು.