ಚಾಮರಾಜನಗರ : ಕಳೆದ ಒಂದು ವಾರದಿಂದ ಎಡಬಿಡದೇ ಸುರಿಯುತ್ತಿರುವ ಮಳೆಗೆ ರಾಗಿ(millet) ಬೆಳೆಗಾರರು ಕಂಗಾಲಾಗಿದ್ದಾರೆ. ಕಟಾವಿಗೆ ಬಂದ ಫಸಲಿನಲ್ಲಿ ಮೊಳಕೆ ಬಂದು ಕೈಗೆ ಬಂದ ತುತ್ತು ಬಾಯಿಗೆ ಬರದಂತಾಗಿದೆ.
ಹನೂರು ತಾಲೂಕಿನ ಮಲೆಮಹದೇಶ್ವರ ಬೆಟ್ಟದ ಹತ್ತಾರು ಹಳ್ಳಿಗಳಲ್ಲಿ ರಾಗಿ ಬೆಳೆಗಾರರ ಸ್ಥಿತಿ ಶೋಚನೀಯವಾಗಿದೆ. ನೂರಾರು ಎಕರೆ ಫಸಲು ನಾಶವಾಗಿರುವುದು ಮೇಲ್ನೋಟಕ್ಕೆ ಕಂಡು ಬಂದಿದೆ. ಇತ್ತ ಬೆಳೆಯೂ ಇಲ್ಲ, ಹಣವೂ ಇಲ್ಲದ ಸಂದಿಗ್ಧ ಸ್ಥಿತಿಯಲ್ಲಿ ಅನ್ನದಾತರಿದ್ದಾರೆ.
ಮಾದಪ್ಪನ ಬೆಟ್ಟದ ತಪ್ಪಲಿನ ಹಳೆಯೂರು ಗ್ರಾಮದ ಮಾದಯ್ಯ ಎಂಬುವರ ಜಮೀನಿನಲ್ಲಿ ಬೆಳೆದಿದ್ದ ರಾಗಿ ಬೆಳೆ ಜಡಿ ಮಳೆಯಿಂದಾಗಿ ಸಂಪೂರ್ಣ ಹಾಳಾಗಿದೆ. ಇದಲ್ಲದೇ ಮಹದೇಶ್ವರ ಬೆಟ್ಟ ಸುತ್ತಮುತ್ತಲಿನ ಗ್ರಾಮಗಳಲ್ಲಿಯೂ ಇದೇ ಸ್ಥಿತಿ ನಿರ್ಮಾಣವಾಗಿದೆ.
ಇಲ್ಲಿನ ಬಹುತೇಕ ರೈತರು ನೂರಾರು ಎಕರೆ ಜಮೀನಿನಲ್ಲಿ ಈ ಬಾರಿ ರಾಗಿ ಬೆಳೆದಿದ್ದಾರೆ. ಆದರೆ, ನಿರಂತರವಾಗಿ ಬೀಳುತ್ತಿರುವ ಮಳೆಯಿಂದಾಗಿ ಕಟಾವಿಗೆ ಬಂದಿದ್ದ ರಾಗಿ ಈಗ ಹಾಳಾಗಿದೆ.
ಇರುವ ಅಲ್ಪ ಜಮೀನಿನಲ್ಲಿ ರಾಗಿ ಬೆಳೆದು ಆಹಾರಕ್ಕಾಗಿ ಬಳಸುತ್ತಿದ್ದೆವು. ಜಮೀನಿನಲ್ಲಿ ರಾಗಿ ಹುಲುಸಾಗಿ ಬಂದಿದೆ. ಆದರೆ, ನಿರಂತರವಾಗಿ ಮಳೆ ಬೀಳುತ್ತಿರುವುದರಿಂದ ಕಟಾವಿಗೆ ತೊಂದರೆಯಾಗಿದೆ. ಅಲ್ಲದೇ ಜಡಿ ಮಳೆಗೆ ರಾಗಿಯಲ್ಲಿ ಮೊಳಕೆ ಬಂದಿದೆ.
ಹೀಗಾಗಿ, ಅದನ್ನು ಕಟಾವು ಮಾಡಲಾಗದೇ ಇತ್ತ ಜಮೀನಿನಲ್ಲೂ ಬಿಡಲಾಗದೇ ಪರದಾಡುವಂತಾಗಿದೆ. ನಮ್ಮ ಜಮೀನು ಮಾತ್ರವಲ್ಲದೇ ಸುತ್ತಮುತ್ತಲಿನ ಜಮೀನಿನಲ್ಲಿ ರೈತರು ಸಹ ಇದೇ ಸಂಕಷ್ಟಕ್ಕೆ ಒಳಗಾಗಿದ್ದಾರೆ ಎಂದು ರೈತ ಮಾದಯ್ಯ ತಮ್ಮ ನೋವು ತೋಡಿಕೊಂಡಿದ್ದಾರೆ.
ಇರುವ ಅಲ್ಪಸ್ವಲ್ಪ ಜಮೀನಿನಲ್ಲಿ ರಾಗಿ ಬೆಳೆದಿದ್ದ ರೈತರು ಈಗ ನಷ್ಟ ಅನುಭವಿಸುವಂತಾಗಿದೆ. ಪ್ರತಿ ವರ್ಷದಂತೆ ಈ ವರ್ಷವೂ ರಾಗಿ ಉತ್ತಮ ಇಳುವರಿ ಬರಬಹುದು ಎಂಬ ನಿರೀಕ್ಷೆಯಲ್ಲಿದ್ದ ರೈತರಿಗೆ ಕಳೆದ ಒಂದು ವಾರದಿಂದ ಬೀಳುತ್ತಿರುವ ಮಳೆ ನಿರಾಶೆ ಮೂಡಿಸಿದೆ.
ಏಳೆಂಟು ತಿಂಗಳಿನಿಂದ ಕಾಪಾಡಿಕೊಂಡ ಬಂದ ಫಸಲು ಕಟಾವು ಸಂದರ್ಭದಲ್ಲಿ ಹಾಳಾಗಿದೆ. ಇದರಿಂದ ಕೈಗೆ ಬಂದ ತುತ್ತು ಬಾಯಿಗೆ ಬರದಂತಾಗಿದೆ. ಮಹದೇಶ್ವರ ಬೆಟ್ಟದ ತಪ್ಪಲಿನಲ್ಲಿ ಬಹುತೇಕ ರೈತರು ರಾಗಿ ಫಸಲನ್ನು ಬೆಳೆದಿದ್ದಾರೆ.
ಆದರೆ, ಕಳೆದ 15 ದಿನಗಳಿಂದ ನಿರಂತರವಾಗಿ ಬೀಳುತ್ತಿರುವ ಮಳೆಯಿಂದಾಗಿ ರೈತರು ಸಂಕಷ್ಟಕ್ಕೆ ಸಿಲುಕಿದ್ದಾರೆ. ಕೂಡಲೇ ಸಂಬಂಧ ಪಟ್ಟ ಕೃಷಿ ಇಲಾಖೆ ಸೂಕ್ತ ಪರಿಹಾರ ನೀಡಬೇಕು ಎಂದು ರೈತ ಸಂಘದ ಹನೂರು ಘಟಕದ ಅಧ್ಯಕ್ಷ ಚಂಗಡಿ ಕರಿಯಪ್ಪ ಒತ್ತಾಯಿಸಿದ್ದಾರೆ.