ಚಾಮರಾಜನಗರ: ಜಿಲ್ಲೆಯ ಹಲವೆಡೆ ಗುಡುಗು-ಸಿಡಿಲಿನ ಆರ್ಭಟದೊಂದಿಗೆ ಸುರಿದ ಮಳೆಗೆ ಇಳೆ ತಂಪಾಗಿದೆ.
ಜಿಲ್ಲಾಕೇಂದ್ರ ಸೇರಿದಂತೆ ತಾಲೂಕಿನ ಅರಕಲವಾಡಿ, ಯಾನಗಳ್ಳಿ, ಬದನಗುಪ್ಪೆ ಭಾಗದಲ್ಲಿ ಸಾಧಾರಣ ಮಳೆಯಾಗಿದೆ. ಹನೂರು ಮತ್ತು ಕೊಳ್ಳೇಗಾಲ ತಾಲೂಕಿನ ಹಲವೆಡೆ ಮಳೆ ಕೇವಲ ತುಂತುರು ಹನಿ ಬಿದ್ದು ಗುಡುಗಿನ ಆರ್ಭಟಕ್ಕಷ್ಟೆ ಸೀಮಿತವಾಗಿದೆ.
ಗುಂಡ್ಲುಪೇಟೆ ಭಾಗದಲ್ಲಿ ಅರ್ಧ ತಾಸಿಗೂ ಹೆಚ್ಚು ಕಾಲ ಭರ್ಜರಿ ಮಳೆಯಾಗಿದೆ. ಬೊಮ್ಮಲಾಪುರ, ಬಾಚಹಳ್ಳಿ, ಕುಂದಕೆರೆ ಅರಣ್ಯ ವಲಯದಲ್ಲಿ ಉತ್ತಮ ಮಳೆಯಾಗಿದೆ ಎಂದು ತಿಳಿದುಬಂದಿದ್ದು, ಮಳೆಗಾಗಿ ಕಾತರಿಸಿದ್ದ ರೈತರು ಬಿಸಿಲಿನಿಂದ ತತ್ತರಿಸಿದ್ದ ಜನರಿಗೆ ಮಳೆ ಮಂದಹಾಸ ಮೂಡಿಸಿದೆ.