ಚಾಮರಾಜನಗರ: ವಾಯುಭಾರ ಕುಸಿತದಿಂದ ಇಂದು ಜಿಲ್ಲೆಯ ಬಹುತೇಕ ಕಡೆ ಗುಡುಗು ಸಿಡಿಲಿನ ಆರ್ಭಟದೊಂದಿಗೆ ಜೋರು ಮಳೆಯಾಗಿದೆ.
ಚಾಮರಾಜನಗರ ಜಿಲ್ಲಾ ಕೇಂದ್ರ ಹಾಗೂ ತಾಲೂಕು, ಹನೂರು, ಕೊಳ್ಳೇಗಾಲ, ಗುಂಡ್ಲುಪೇಟೆಯ ಕೆಲವಡೆ ಭಾರೀ ಮಳೆಯಾಗಿದ್ದು, ಹನೂರಿನ ಸುತ್ತಮುತ್ತಲಿನ ಹಳ್ಳಗಳು ತುಂಬಿ ಹರಿದು ಜನರು ಸೇತುವೆ ದಾಟಲು ಪರದಾಡಿದರು.
ಹನೂರು ಸಮೀಪದಲ್ಲಿನ ಸ್ವಾಮಿಹಳ್ಳ ತುಂಬಿ ಸೇತುವೆ ಮೇಲ್ಭಾಗದಲ್ಲಿ ನೀರು ಹರಿದಿದ್ದರಿಂದ ಬಂಡಳ್ಳಿ, ಚಿಂಚಳ್ಳಿ, ಹಲಗಾಪುರ, ಶಾಗ್ಯ ತೋಮಿಯರ್‍ಪಾಳ್ಯ ಸೇರಿದಂತೆ ವಿವಿಧ ಗ್ರಾಮಗಳಿಗೆ ತೆರಳಲು ಜನರು 2 ತಾಸಿಗೂ ಹೆಚ್ಚು ಕಾಲ ಪರದಾಡಿದರು. ಕೆಲವರು ಹುಂಬತನಿದಿಂದ ತುಂಬಿ ಹರಿಯುವ ಹಳ್ಳ ದಾಟಿದ ಘಟನೆಯೂ ನಡೆಯಿತು.
ಜಿಲ್ಲಾದ್ಯಂತ ಕಳೆದ ಒಂದು ವಾರದಿಂದ ಬೀಳುತ್ತಿರುವ ಮಳೆಯಿಂದಾಗಿ ರೈತರು ಜಮೀನುಗಳಲ್ಲಿ ಕೃಷಿ ಚಟುವಟಿಕೆಯಲ್ಲಿ ತೊಡಗಿದ್ದಾರೆ. ಹವಾಮಾನ ತಜ್ಞರು ಮಂಗಳವಾರ ಇಲ್ಲವೇ ಬುಧವಾರ ಜಿಲ್ಲೆಗೆ ಮಾನ್ಸೂನ್ ಪ್ರವೇಶವಾಗಲಿದೆ ಎಂದು ಈಟಿವಿ ಭಾರತಕ್ಕೆ ಮಾಹಿತಿ ನೀಡಿದ್ದಾರೆ.