ಚಾಮರಾಜನಗರ : ಮಹಿಳೆಯೊಂದಿಗೆ ದೈಹಿಕ ಸಂಪರ್ಕ ಬೆಳೆಸಿ ಮಗುವಾದ ಬಳಿಕ ಆಕೆಗೆ ಕೊಲೆ ಬೆದರಿಕೆ ಹಾಕಿದ್ದ ವಿವಾಹಿತ ವಿಶೇಷ ಚೇತನ ವ್ಯಕ್ತಿಗೆ ಚಾಮರಾಜನಗರ ಜೆಎಂಎಫ್ಸಿ ನ್ಯಾಯಾಲಯವು 6 ತಿಂಗಳು ಶಿಕ್ಷೆ ವಿಧಿಸಿ ಆದೇಶಿಸಿದೆ. ಚಾಮರಾಜನಗರ ತಾಲೂಕಿನ ಕುಲಗಾಣ ಗ್ರಾಮದ ಗುರುಸ್ವಾಮಿ ಎಂಬಾತ ಶಿಕ್ಷೆಗೊಳಗಾದ ವಿಶೇಷ ಚೇತನ ಅಪರಾಧಿ ಎಂಬುದು ತಿಳಿದು ಬಂದಿದೆ.
ಈತ ಅದೇ ಗ್ರಾಮದ ವಿಶೇಷ ಚೇತನ ಮಹಿಳೆಯೊಟ್ಟಿಗೆ ದೈಹಿಕ ಸಂಪರ್ಕ ಬೆಳೆಸಿದ್ದಾನೆ. ಅಲ್ಲದೇ, ಬಳಿಕ ಆಕೆಗೆ ಮಗುವಾದ ನಂತರ ತನ್ನ ಹೆಸರನ್ನು ಯಾರಿಗೂ ಹೇಳಬೇಡವೆಂದು ಕೊಲೆ ಬೆದರಿಕೆಯನ್ನು ಹಾಕಿದ್ದ. ಈ ಸಂಬಂಧ 2012ರಲ್ಲಿ ಚಾಮರಾಜನಗರ ಗ್ರಾಮಾಂತರ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು.
ವಾದ-ಪ್ರತಿವಾದ ಆಲಿಸಿದ ನ್ಯಾಯಾಧೀಶರಾದ ಮಹಮ್ಮದ್ ರೋಶನ್ ಶಾ ಅವರು, ಆರೋಪ ಸಾಬೀತಾದ ಹಿನ್ನೆಲೆಯಲ್ಲಿ ಅಪರಾಧಿಗೆ 6 ತಿಂಗಳು ಸಾದಾ ಸಜೆ, 2 ಸಾವಿರ ರೂ. ದಂಡ ವಿಧಿಸಿ ಆದೇಶಿಸಿದ್ದಾರೆ. ಸರ್ಕಾರದ ಪರವಾಗಿ ಎಪಿಪಿ ಎ. ಸಿ ಮಹೇಶ್ ವಾದ ಮಂಡಿಸಿದ್ದರು. ಇನ್ನು 2013ರಲ್ಲಿ ವಿವಾಹೇತರ ಸಂಬಂಧದಿಂದ ಜನಿಸಿದ ಮಗುವನ್ನು ಇಬ್ಬರೂ ಬೇಡವೆಂದಿದ್ದಾರೆ.
ಹೀಗಾಗಿ, ಮಕ್ಕಳ ಕಲ್ಯಾಣ ಇಲಾಖೆಯು ಶಿಶುವನ್ನು ತಮ್ಮ ಸುಪರ್ದಿಗೆ ಪಡೆದು ಪಾಲಕರೊಬ್ಬರಿಗೆ ದತ್ತು ಕೊಟ್ಟಿದ್ದಾರೆ. ಇದೀಗ ಕೊಲೆ ಬೆದರಿಕೆ ಹಾಕಿದ್ದ ವಿವಾಹಿತ ವಿಶೇಷ ಚೇತನ ವ್ಯಕ್ತಿಗೆ ನ್ಯಾಯಾಲಯದಿಂದ ಶಿಕ್ಷೆ ಪ್ರಕಟವಾಗಿದೆ.
ಓದಿ: ಕಿವಿ ಚಿಕಿತ್ಸೆಗೆ ಬಂದ ಮಹಿಳೆ ಸಾವು: ಗದಗ ಜಿಮ್ಸ್ ವೈದ್ಯರ ವಿರುದ್ಧ ಕುಟುಂಬಸ್ಥರ ಆಕ್ರೋಶ