ಚಾಮರಾಜನಗರ: ಕ್ಷುಲ್ಲಕ ಕಾರಣಕ್ಕೆ ಯುವಕನ ಕಾಲಿಗೆ ಗುಂಡು ಹಾರಿಸಿರುವ ಘಟನೆ ನಗರದ ಗುಂಡ್ಲುಪೇಟೆ ವೃತ್ತದಲ್ಲಿ ನಡೆದಿದೆ.
ರಾಜೀಕ್ ಅಹಮ್ಮದ್ (26) ಎಂಬಾತನಿಗೆ ಸಯ್ಯದ್ ಫಾರುಕ್, ತೌಶಿರ್, ಷಹಜಹಾನ್ ಎಂಬ ಮೂವರು ಮೊದಲು ಮಚ್ಚಿನಿಂದ ಹಲ್ಲೆ ನಡೆಸಿದ್ದಾರೆ. ಬಳಿಕ ಸಯ್ಯದ್ ಫಾರುಕ್ ಎಂಬಾತ ತೊಡೆಯ ಭಾಗಕ್ಕೆ ಎರಡು ಗುಂಡುಗಳನ್ನು ಹಾರಿಸಿದ್ದಾನೆ ಎನ್ನಲಾಗಿದೆ. ಸದ್ಯ, ಗಂಭೀರವಾಗಿ ಗಾಯಗೊಂಡ ಅಹ್ಮದ್ನನ್ನು ಜಿಲ್ಲಾಸ್ಪತ್ರೆಗೆ ದಾಖಲಿಸಲಾಗಿದೆ.
ರಾಜೀಕ್ ಅಹ್ಮದ್ ಹಾಗೂ ಆತನ ಸಹೋದರ ತಾಪಂ ಕಟ್ಟಡ ಸಂಕೀರ್ಣದಲ್ಲಿ ಕಬ್ಬಿಣದಂಗಡಿ ಇಟ್ಟುಕೊಂಡಿದ್ದರು ಎಂದು ತಿಳಿದುಬಂದಿದೆ. ಗ್ರಾಹಕರಿಗೆ ದಾರಿತಪ್ಪಿಸುವ ಕೆಲಸ ಮಾಡುತ್ತೀಯಾ ಎಂದು ರಾಜೀಕ್ ಅಹ್ಮದ್ನ ತಮ್ಮನಿಗೆ ಹೊಡೆದಿದ್ದರು ಎನ್ನಲಾಗಿದೆ.
ವಿಚಾರ ತಿಳಿದ ರಾಜೀಕ್ ಹೊಡೆದಿದ್ದೇಕೆ ಎಂದು ಕೇಳಲು ರಾತ್ರಿ ತೆರಳಿದಾಗ ತೌಶಿರ್ ಹಾಗೂ ಷಹಜಹಾನ್ ಮಚ್ಚಿನಿಂದ ಹೊಡೆದಿದ್ದಾರೆ. ನಂತರ ಸಯ್ಯದ್ ಫಾರುಕ್ ತೊಡೆ ಭಾಗಕ್ಕೆ ಪಿಸ್ತೂಲ್ನಿಂದ ಗುಂಡು ಹಾರಿಸಿದ್ದಾರೆ. ಈ ಸಂಬಂಧ ಚಾಮರಾಜನಗರ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದು, ಹಲ್ಲೆ ನಡೆಸಿದ ಆರೋಪಿಗಳು ಪರಾರಿಯಾಗಿದ್ದಾರೆ.