ಚಾಮರಾಜನಗರ: ರಾಜಕಾರಣಿಗಳು ನೀಡುವ ಆಶ್ವಾಸನೆಗಳು ಈಡೇರಿಸುವುದಿರಲಿ, ಅವುಗಳನ್ನು ಮರೆಯದಿದ್ದರೇ ಸಾಕು ಎಂಬ ಸ್ಥಿತಿಯಲ್ಲಿದ್ದೇವೆ ನಾವು. ಆದರೆ ಇಲ್ಲಿ ತಾವು ನೀಡಿರುವ ಆಶ್ವಾಸನೆಗಳಿಗೆ ಕಾಲ ನಿಗದಿ ಮಾಡಿಕೊಂಡು ಚುನಾವಣಾ ಅಖಾಡಕ್ಕೆ ಧುಮುಕಿದ್ದಾರೆ ಗಡಿನಾಡ ಕನ್ನಡಿಗರು.
ಹೌದು, ಕನ್ನಡಿಗರೇ ಹೆಚ್ಚಿರುವ ತಮಿಳುನಾಡಿನ ತಾಳವಾಡಿ ತಾಲೂಕಿನ 4 ಗ್ರಾಮ ಪಂಚಾಯತ್ ಕ್ಷೇತ್ರ, 2 ಗ್ರಾಮ ಪಂಚಾಯತ್ ಅಧ್ಯಕ್ಷ ಸ್ಥಾನ ಮತ್ತು ತಾಲೂಕು ಪಂಚಾಯತ್‌ನ 2 ವಾರ್ಡ್ಗಳಿಗೆ ಸ್ಪರ್ಧಿಸುತ್ತಿರುವ ಸಂಘಟನೆಯ ಅಭ್ಯರ್ಥಿಗಳು, ನಾವು ನೀಡಿರುವ ಆಶ್ವಾಸನೆಗಳನ್ನು 6 ತಿಂಗಳಿನಲ್ಲಿ ಈಡೇರಿಸದಿದ್ದರೇ ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡುತ್ತೇವೆಂದು ಘೋಷಿಸಿಕೊಂಡಿದ್ದಾರೆ.
ಕುಡಿಯುವ ನೀರು, ಬೀದಿ ದೀಪದ ವ್ಯವಸ್ಥೆ, ಒಳಚರಂಡಿ ಮತ್ತು ಸಿಸಿ ರಸ್ತೆ ಹಾಗೂ ಜಾನುವಾರುಗಳಿಗೆ ಕುಡಿಯುವ ನೀರಿನ ತೊಟ್ಟಿ ನಿರ್ಮಿಸಿಕೊಡಲಿದ್ದೇವೆ. ಒಂದು ವೇಳೆ ನೀಡಿದ ಆಶ್ವಾಸನೆಗಳನ್ನು ಆರು ತಿಂಗಳೊಳಗೆ ಈಡೇರಿಸದಿದ್ದಲ್ಲಿ ರಾಜೀನಾಮೆ ನೀಡುತ್ತೇವೆ ಎಂದು ಗಮನ ಸೆಳೆದಿದ್ದಾರೆ.
ವೆಡಿಲ್ ಎಂಬ ಯುವಕರ ಸಂಘಟನೆ ಈಗಾಗಲೇ ಉಚಿತ ಆ್ಯಂಬುಲೆನ್ಸ್ ಸೇವೆ, ಅನಾಥ ಶವಗಳ ಅಂತ್ಯಕ್ರಿಯೆ, ಅಶಕ್ತರಿಗೆ ನೆರವು, ಯಾವುದೇ ಲಂಚ ನೀಡದೇ ಸರ್ಕಾರಿ ಕೆಲಸಗಳನ್ನು ದುರ್ಬಲ ವರ್ಗಕ್ಕೆ ಮಾಡಿಸಿಕೊಡುವ ಮೂಲಕ ತಾಳವಾಡಿಯಲ್ಲಿ ಸಕ್ರಿಯವಾಗಿ ತೊಡಗಿಸಿಕೊಂಡಿದೆ.