ಚಾಮರಾಜನಗರ: ಆಕ್ಸಿಜನ್ ಕೊರತೆಯಿಂದ 24 ಮಂದಿ ಮೃತಪಟ್ಟ ಘಟನೆ ಬಳಿಕ ಸದ್ಯ ಚಾಮರಾಜನಗರದಲ್ಲಿ ಆಕ್ಸಿಜನ್ ಸಮಸ್ಯೆ ತಲೆದೋರಿಲ್ಲ. ಆದರೆ ಆಸ್ಪತ್ರೆ ಅವ್ಯವಸ್ಥೆ ಮಾತ್ರ ಅದೇ ರೀತಿ ಮುಂದುವರೆದಿದೆ ಎನ್ನುವ ಆರೋಪ ಕೇಳಿಬಂದಿದೆ.
ಚಾಮರಾಜನಗರ ಜಿಲ್ಲಾಡಳಿತ ಹೇಳುತ್ತಿರುವುದೊಂದು. ಆದ್ರೆ ಆಸ್ಪತ್ರೆಯಲ್ಲಿ ಕಾಣುತ್ತಿರುವುದೇ ಮತ್ತೊಂದು. ವೈದ್ಯಕೀಯ ಸಿಬ್ಬಂದಿಯ ದಿವ್ಯ ನಿರ್ಲಕ್ಷ್ಯ ಎದ್ದು ಕಾಣುತ್ತಿದೆ. ಸೋಂಕಿತನೋರ್ವನಿಗೆ ಬೆಡ್ ಇಲ್ಲ ಎಂದು ವೈದ್ಯಕೀಯ ಸಿಬ್ಬಂದಿ ತಿಳಿಸಿದ್ದರಿಂದ ಸೋಂಕಿತ ಆಸ್ಪತ್ರೆ ಆವರಣದಲ್ಲೇ ತಿರುಗಾಡುತ್ತಿದ್ದ ಘಟನೆ ಇಂದು ಬೆಳಗ್ಗೆ ನಡೆದಿದ್ದು, ಸೋಂಕಿತರಿಗೆ ವಾಹನ ವ್ಯವಸ್ಥೆ ಮಾಡಲಾಗಿದೆ ಎಂಬ ಡಿಸಿ ಮಾತು ಇಲ್ಲಿ ಸುಳ್ಳಾಗಿದೆ.
ಆರೋಪಗಳೇನು?
ಇನ್ನು ದುರಂತದ ಬಳಿಕ ಆಸ್ಪತ್ರೆಯಲ್ಲಿ ದಾಖಲಾಗಿರುವ ರೋಗಿಗಳು ಹೇಗಿದ್ದಾರೋ ಏನೋ ಎಂದು ಸಂಬಂಧಿಕರು ಆಸ್ಪತ್ರೆ ಮುಂಭಾಗವೇ ಜಮಾಯಿಸಿದ್ದು, ಅವರಲ್ಲಿ ಆತಂಕ ಮನೆ ಮಾಡಿದೆ. ತುರ್ತು ಚಿಕಿತ್ಸೆಗೆ ಬಂದಿರುವ ನಾನ್ ಕೋವಿಡ್ ರೋಗಿಗಳ ಸಂಬಂಧಿಕರು ಜಿಲ್ಲಾಸ್ಪತ್ರೆ ಆವರಣದಲ್ಲೇ ಜಮಾಯಿಸಿದ್ದು, ಆಸ್ಪತ್ರೆಯೇ ಕೊರೊನಾ ಉತ್ಪಾದನಾ ಕೇಂದ್ರವಾಗಿ ಗೋಚರಿಸುತ್ತಿದೆ. ದುರಂತದ ಬಳಿಕ ನೂರಾರು ಆಕ್ಸಿಜನ್ ಸಿಲಿಂಡರ್ ಬಂದಿದ್ದರೂ ಜಿಲ್ಲಾಡಳಿತ, ಆರೋಗ್ಯ ಇಲಾಖೆ ದಿವ್ಯ ನಿರ್ಲಕ್ಷ್ಯ ಇನ್ನೂ ಮುಂದುವರೆದಿದೆ ಎನ್ನುವ ಆರೋಪಗಳು ಕೇಳಿಬಂದಿವೆ.
ಸದ್ಯ, ಕೋವಿಡ್ ಆಸ್ಪತ್ರೆಯಲ್ಲಿ 24 ವೆಂಟಿಲೇಟರ್‌ಗಳಿವೆ. 53 ಐಸಿಯು ಹಾಗೂ 55 ಆಮ್ಲಜನಕ ಸಹಿತ ಹಾಸಿಗೆಗಳಿದ್ದು, ಇವೆಲ್ಲವೂ ಬಹುತೇಕ ಭರ್ತಿಯಾಗಿವೆ ಎಂದು ವೈದ್ಯ ಮೂಲಗಳು ತಿಳಿಸಿವೆ.
ಆಕ್ಸಿಜನ್ ಪೂರೈಕೆ:
ದುರಂತ ನಡೆದ ಕ್ಷಣದಿಂದ ತುರ್ತಾಗಿ ಮೈಸೂರಿನ ಸದರನ್ ಏಜೆನ್ಸಿಯು ಆ್ಯಕ್ಸಿಜನ್ ಪೂರೈಸುತ್ತಿದ್ದು, ಸೋಮವಾರ ರಾತ್ರಿ 160 ಜಂಬೋ ಸಿಲಿಂಡರ್ ಕಳುಹಿಸಿಕೊಟ್ಟಿದೆ. ಇಂದು ಮಧ್ಯಾಹ್ನದ ವೇಳೆಗೆ ಇನ್ನೂ 100 ಸಿಲಿಂಡರ್ ಕಳುಹಿಸಲಿದೆ ಎಂಬ ಮಾಹಿತಿ ಲಭ್ಯವಾಗಿದ್ದು, ಸದ್ಯ ಆಸ್ಪತ್ರೆಯಲ್ಲಿ ದಿನಕ್ಕಾಗುವಷ್ಟು ಆಕ್ಸಿಜನ್ ಇದೆ.
ದುರಂತದ ತನಿಖೆ:
ಆಕ್ಸಿಜನ್ ದುರಂತಕ್ಕೆ ಸಂಬಂಧಿಸಿದಂತೆ ತನಿಖಾಧಿಕಾರಿಯಾಗಿರುವ KSRTC ಎಂಡಿ ಶಿವಯೋಗಿ ಕಳಸದ್ ಇಂದಿನಿಂದಲೇ ತನಿಖೆ ನಡೆಸಲಿದ್ದಾರೆ. ಆಕ್ಸಿಜನ್ ದುರಂತಕ್ಕೆ ನೈಜ ಕಾರಣವೇನು, ಎಷ್ಟು ಮಂದಿ ಸೋಂಕಿತರು ಆಮ್ಲಜನಕ ಕೊರತೆಯಿಂದ ಅಸುನೀಗಿದ್ದಾರೆ, ಈ ಅವಘಡಕ್ಕೆ ಹೊಣೆ ಯಾರು ಹೊರಬೇಕು, ಆಸ್ಪತ್ರೆ ಸಿಬ್ಬಂದಿ ಹಾಗೂ ಜಿಲ್ಲಾಡಳಿತ ಸಿಬ್ಬಂದಿ ವೈಫಲ್ಯದ ಕುರಿತು ತನಿಖೆ ನಡೆಸುವ ಸಾಧ್ಯತೆ ಇದೆ.
ಆದರೆ, ಆಮ್ಲಜನಕ ಕೊರತೆಯಿಂದ ಮೂವರು ಮೃತಪಟ್ಟಿದ್ದಾರೆ, 24 ಮಂದಿಯಲ್ಲ ಎಂದು ಸುದ್ದಿಗೋಷ್ಠಿಯಲ್ಲಿ ಆರೋಗ್ಯ ಸಚಿವ ಡಾ. ಸುಧಾಕರ್ ತಿಳಿಸಿರುವುದರಿಂದ ತನಿಖೆಯಿಂದ ಹೆಚ್ಚೇನನ್ನೂ ನಿರೀಕ್ಷಿಸಲಾಗಲ್ಲ. ಘಟನೆಗೆ ಯಾರೂ ಹೊಣೆಯಾಗದೆ, ಮುಚ್ಚಿ ಹಾಕುತ್ತಾರೆ ಎಂಬ ಟೀಕೆಗಳು ವ್ಯಕ್ತವಾಗಿವೆ.
ಕಾಂಗ್ರೆಸ್ ನಾಯಕರು ಭೇಟಿ:
ಆಕ್ಸಿಜನ್ ದುರಂತದಲ್ಲಿ ಮೃತಪಟ್ಟ ಸೋಂಕಿತರ ಕುಟುಂಬಸ್ಥರನ್ನು ಮಾಜಿ ಸಿಎಂ ಸಿದ್ದರಾಮಯ್ಯ ಹಾಗೂ ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಇಂದು ಬೆಳಗ್ಗೆ 11ಕ್ಕೆ ಭೇಟಿಯಾಗಿ ಸಾಂತ್ವನ ಹೇಳಿದ್ದು, ಬಳಿಕ ಅಧಿಕಾರಿಗಳ ಸಭೆ ನಡೆಸಿ ದುರಂತದ ಮಾಹಿತಿ ಪಡೆಯಲಿದ್ದಾರೆ.
ಕಾಂಗ್ರೆಸ್ ನಾಯಕರ ಆರೋಪ:
ಆರೋಗ್ಯ ಇಲಾಖೆ ಹೇಳಿರುವಂತೆ 24 ಮಂದಿ ಸತ್ತಿಲ್ಲ, 34 ಮಂದಿ ಮೃತಪಟ್ಟಿದ್ದು ಜಿಲ್ಲಾಡಳಿತ ಮತ್ತು ಸರ್ಕಾರ ಮೃತರ ಸಾವಿನ ಲೆಕ್ಕವನ್ನು ಮುಚ್ಚಿಡುತ್ತಿದ್ದಾರೆ ಎಂಬ ಗಂಭೀರ ಆರೋಪವನ್ನು ಕಾಂಗ್ರೆಸ್ ಶಾಸಕರು ಮಾಡಿದ್ದಾರೆ.
ಇದನ್ನೂ ಓದಿ: ಚಾಮರಾಜನಗರ ಜಿಲ್ಲಾಸ್ಪತ್ರೆಗಿಂದು ತನಿಖಾಧಿಕಾರಿ ಕಳಸದ್ ಭೇಟಿ
ಸದ್ಯ, ಜಿಲ್ಲಾಸ್ಪತ್ರೆಯಲ್ಲಿ ಅವ್ಯವಸ್ಥೆ, ಸೋಂಕಿತರ ಸಂಬಂಧಿಕರಲ್ಲಿ ಅತಂಕ, ದುಗುಡ ಮುಂದುವರೆದಿದೆ.