ಚಾಮರಾಜನಗರ: ಪ್ರವಾಹ ಪೀಡಿತ ಪ್ರದೇಶಗಳಲ್ಲಿ ಶಾಶ್ವತ ಪುನರ್ವಸತಿ ಕೇಂದ್ರಗಳನ್ನು ಸ್ಥಾಪಿಸಲು ಸರ್ಕಾರ ಚಿಂತನೆ ನಡೆಸುತ್ತಿದೆ ಎಂದು ಕಂದಾಯ ಸಚಿವ ಆರ್. ಅಶೋಕ್ ತಿಳಿಸಿದರು.
ನಗರದಲ್ಲಿ ಸುದ್ದಿಗಾರರೊಂದಿಗೆ ಅವರು ಮಾತನಾಡಿದ ಅವರು, ಈ ಹಿಂದೆ ಪ್ರವಾಹ ಉಂಟಾದಾಗ ಶಾಲೆಗಳು, ಛತ್ರಗಳು, ವಿದ್ಯಾರ್ಥಿನಿಯಲಗಳನ್ನು ಆಶ್ರಯಿಸುತ್ತಿದ್ದೆವು. ಆದರೆ ಮೂಲಸೌಕರ್ಯಗಳನ್ನು ತೃಪ್ತಿಕರವಾಗಿ ನೀಡಲಾಗದ್ದನ್ನು ಗಮನದಲ್ಲಿಟ್ಟುಕೊಂಡು ಕೊಡಗು, ಮೈಸೂರು, ಬೆಳಗಾವಿ ಭಾಗದ ಪ್ರವಾಹ ಪೀಡಿತ ಪ್ರದೇಶಗಳಲ್ಲಿ ಸುಸಜ್ಜಿತ ಪುನರ್ವಸತಿ ಕೇಂದ್ರಗಳನ್ನು ಸರ್ಕಾರ ನಿರ್ಮಿಸಲಿದೆ ಎಂದರು.
ಕೇಂದ್ರ ಸರ್ಕಾರ ಪ್ರಾಕೃತಿಕ ವಿಕೋಪಕ್ಕಾಗಿ ರಾಜ್ಯಕ್ಕೆ 1,311 ಕೋಟಿ ರೂ, ಘೋಷಿಸಿದ್ದು ಅದರಲ್ಲಿ 300 ಕೋಟಿ ರೂ, ಬಿಡುಗಡೆ ಮಾಡಿದೆ ಎಂದು ಸಚಿವರು ಮಾಹಿತಿ ನೀಡಿದರು.
ನಿಸರ್ಗ ಚಂಡಮಾರುತದ ಅಬ್ಬರವನ್ನು ನಿರ್ವಹಿಸಲು ಸರ್ಕಾರ ಈಗಾಗಲೇ ಸಿದ್ಧತೆ ಮಾಡಿಕೊಂಡಿದೆ. ಈ ನಿಟ್ಟಿನಲ್ಲಿ 4 ಎನ್ಡಿಆರ್ಎಫ್ ತಂಡಗಳು ಬೆಳಗಾವಿ, ಧಾರವಾಡ, ಮೈಸೂರು ಹಾಗೂ ಕೊಡಗಿಗೆ ಆಗಮಿಸಲಿವೆ. ಅಗ್ನಿ ಶಾಮಕ ದಳಕ್ಕೆ ಉಪಕರಣಗಳನ್ನು ಕೊಳ್ಳಲು ಕಂದಾಯ ಇಲಾಖೆ ಈ ಬಾರಿ ಹಣ ನೀಡಲಿದೆ ಎಂದು ಹೇಳಿದರು.
ಚಾಮರಾಜನಗರ ಜಿಲ್ಲಾಡಳಿತವು ಕೋವಿಡ್-19 ಸಂಬಂಧ 2.74 ಕೋಟಿ ರೂ, ಹಣ ಬಿಡುಗಡೆ ಮಾಡಿದೆ. ಇದರಲ್ಲಿ ವಲಸೆ ಕಾರ್ಮಿಕರಿಗೆ 50 ಲಕ್ಷ ರೂ, ಸ್ಯಾಂಪಲ್ ಪರೀಕ್ಷೆಗಾಗಿ 45 ಲಕ್ಷ ರೂ. ಲ್ಯಾಬ್ ನಿರ್ಮಾಣಕ್ಕಾಗಿ 1.79 ಕೋಟಿ ರೂ, ನೀಡಿದ್ದಾರೆ.
ಪಿಡಿ ಖಾತೆಯಲ್ಲಿ 3.56 ಕೋಟಿ ರೂಪಾಯಿ ಹಣವಿದೆ. ಅದನ್ನು ಬರ ಪರಿಹಾರ, ಬೆಳೆಹಾನಿ, ಪ್ರಾಕೃತಿಕ ವಿಕೋಪ ಸಂಬಂಧ ಜಿಲ್ಲಾಧಿಕಾರಿ ಖಾತೆಯಲ್ಲಿ 12.28 ಕೋಟಿ ರೂ. ಇದೆ ಎಂದು ಸಚಿವರು ಮಾಹಿತಿ ನೀಡಿದರು.
ಕಂದಾಯ ಇಲಾಖೆಯಿಂದ ಕೋವಿಡ್-19 ಸಂಬಂಧ ಪೊಲೀಸ್ ಇಲಾಖೆಗೆ 10 ಕೋಟಿ ರೂ, ಆರೋಗ್ಯ ಇಲಾಖೆಗೆ 70 ಕೋಟಿ ರೂ, ಎಲ್ಲಾ ಜಿಲ್ಲಾಧಿಕಾರಿಗಳಿಗೆ 152 ಕೋಟಿ ರೂ, ಕಾರಾಗೃಹಗಳಿಗೆ 2 ಕೋಟಿ ರೂ, ಹಾಗೂ ಬಿಬಿಎಂಪಿಗೆ 50 ಕೋಟಿ ರೂ, ಹಣ ಬಿಡುಗಡೆ ಮಾಡಲಾಗಿದೆ ಎಂದು ಸಚಿವ ಆರ್ ಅಶೋಕ್ ವಿವರಿಸಿದರು.