ಚಾಮರಾಜನಗರ : ಜಿಲ್ಲೆಯಲ್ಲಿ ಮೊದಲ ಬಾರಿಗೆ ಗ್ರಾಮಾಂತರ ಪ್ರದೇಶದಲ್ಲಿ ಡಿಜಿಟಲ್ ಗ್ರಂಥಾಲಯವೊಂದನ್ನು ನಿರ್ಮಾಣ ಮಾಡಲಾಗಿದ್ದು, ಕೆಲವೇ ದಿನಗಳಲ್ಲಿ ಇದು ಹಳ್ಳಿಯ ಜನರ ಬಳಕೆಗೆ ಲಭ್ಯವಾಗಲಿದೆ. ಇಲ್ಲಿನ ಗುಂಡ್ಲುಪೇಟೆ ತಾಲೂಕಿನ ಹುಂಡಿಪುರ ಗ್ರಾಮದಲ್ಲಿ ಈ ಡಿಜಿಟಲ್ ಗ್ರಂಥಾಲಯ ಮತ್ತು ಮಾಹಿತಿ ಕೇಂದ್ರವನ್ನು ಪ್ರಾರಂಭಿಸಲಾಗಿದೆ.
ಗ್ರಾಮ ಪಂಚಾಯತ್ಗೆ ಸೇರಿದ ಹಳೇ ಕಟ್ಟಡವನ್ನು ದುರಸ್ತಿಗೊಳಿಸಿ ಡಿಜಿಟಲ್ ಗ್ರಂಥಾಲಯ ಮತ್ತು ಮಾಹಿತಿ ಕೇಂದ್ರವನ್ನು ಪ್ರಾರಂಭಿಸಲಾಗಿದ್ದು, ನೂತನ ಗ್ರಂಥಾಲಯದಲ್ಲಿ ಒಟ್ಟು12 ಕಂಪ್ಯೂಟರ್ ಜೊತೆಗೆ ಇಂಟರ್ನೆಟ್ ಸೌಲಭ್ಯ ಸಹ ಅಳವಡಿಸಲಾಗಿದೆ. ಇದರ ಜೊತೆಗೆ ಸುಮಾರು 6600 ಪುಸ್ತಕಗಳನ್ನು ಗ್ರಂಥಾಲಯದಲ್ಲಿ ಇರಿಸಲಾಗಿದೆ.
ಗ್ರಾಮೀಣ ಮಟ್ಟದಲ್ಲಿ ಸುಸಜ್ಜಿತವಾದ ಡಿಜಿಟಿಲ್ ಗ್ರಂಥಾಲಯ ಮತ್ತು ಮಾಹಿತಿ ಕೇಂದ್ರ ಜಿಲ್ಲೆಯಲ್ಲಿ ಇದೇ ಮೊದಲಾಗಿದ್ದು ಇಲ್ಲಿ ರೈತರಿಗೆ, ವಿದ್ಯಾರ್ಥಿಗಳಿಗೆ ಹಾಗೂ ಸಾರ್ವಜನಿಕರಿಗೆ ಸರ್ಕಾರಿ ದತ್ತಾಂಶ, ಯೋಜನೆ, ನೌಕರಿಗೆ ಸಂಬಂಧಿಸಿದ ಮತ್ತು ಶಿಕ್ಷಣಕ್ಕೆ ಸಂಬಂಧಿಸಿದ ಹಲವು ಮಾಹಿತಿಯನ್ನು ಆನ್‍ಲೈನ್ ಮೂಲಕ ಪಡೆಯಬಹುದಾಗಿದೆ. ಗ್ರಂಥಾಲಯದಲ್ಲಿ ವೈಫೈ ಇರುವ ಕಾರಣ ಸಾರ್ವಜನಿಕರು ಉಚಿತವಾಗಿ ಇಂಟರ್ನೆಟ್ ಬಳಸಬಹುದಾಗಿದೆ.
ಈ ಸಂಬಂಧ ಹುಂಡೀಪುರ ಗ್ರಾ ಪಂ ಪಿಡಿಒ ಕುಮಾರಸ್ವಾಮಿ ಮಾತನಾಡಿ, ಗ್ರಾ.ಪಂ ಅಧ್ಯಕ್ಷೆ, ಉಪಾಧ್ಯಕ್ಷ ಹಾಗೂ ಸದಸ್ಯರ ಆಸಕ್ತಿಯ ಫಲವಾಗಿ ತುರ್ತಾಗಿ ಕೆಲಸ ಮುಗಿಸಲಾಗಿದೆ. ಡಿಜಿಟಲ್ ಗ್ರಂಥಾಲಯ ಮತ್ತು ಮಾಹಿತಿ ಕೇಂದ್ರಕ್ಕೆ ಬೇಕಾದ ಕಂಪ್ಯೂಟರ್, ಪುಸ್ತಕಗಳನ್ನು ಖರೀದಿಸಲಾಗಿದೆ ಎಂದಿದ್ದಾರೆ. 75 ನೇ ಸ್ವಾತಂತ್ರೋತ್ಸವದ ಅಂಗವಾಗಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಘೋಷಣೆ ಮಾಡಿದ್ದ ಅಮೃತ್ ಗ್ರಾ.ಪಂ ಯೋಜನೆಗೆ ಹುಂಡೀಪುರ ಗ್ರಾ.ಪಂ ಒಳಪಟ್ಟಿತ್ತು.
ಓದಿ :ಕಲಬುರಗಿ: ದೇವಲಗಾಣಗಾಪುರ ದತ್ತಾತ್ರೇಯ ದೇಗುಲದ ಅರ್ಚಕರ ವಿರುದ್ಧ ವಂಚನೆ ಪ್ರಕರಣ