ಚಾಮರಾಜನಗರ: ತಿರುಪತಿ ಲಾಡು ಪ್ರಸಾದ, ಧರ್ಮಸ್ಥಳದ ಅನ್ನ ದಾಸೋಹದಷ್ಟೇ ಪ್ರಸಿದ್ಧಿಯಾಗಿರುವ ಹನೂರು ತಾಲೂಕಿನ ಮಲೆಮಹದೇಶ್ವರ ದೇಗುಲಕ್ಕೆ ಎಫ್ಎಸ್ಎಸ್ಎಐ ಪರವಾನಗಿ ದೊರೆತಿದೆ.
ಆಹಾರದ ಗುಣಮಟ್ಟದ ಖಾತ್ರಿಗಾಗಿ ಕೇಂದ್ರ ಆರೋಗ್ಯ ಮತ್ತು ಕುಟುಂಬ ಇಲಾಖೆಯ ಅಧೀನಕ್ಕೊಳಪಟ್ಟ ಸಂಸ್ಥೆಯಾಗಿರುವ ಆಹಾರ ಸುರಕ್ಷತೆ ಮತ್ತು ಗುಣಮಟ್ಟ ಪ್ರಾಧಿಕಾರದ ಮಾನದಂಡಗಳಿಗೆ ಅನುಗುಣವಾಗಿ ಕ್ಷೇತ್ರದಲ್ಲಿ ದಾಸೋಹ ಮತ್ತು ಲಾಡು ಪ್ರಸಾದ ತಯಾರಿಕೆ, ಹಂಚಿಕೆ ನಡೆಯುತ್ತಿರುವ ಹಿನ್ನೆಲೆಯಲ್ಲಿ ಈ ಲೈಸೆನ್ಸ್ ದೊರೆತಿದ್ದು, ಪ್ರತಿವರ್ಷವೂ ನವೀಕರಿಸಿಕೊಳ್ಳಬೇಕಿದೆ.
ಲೈಸೆನ್ಸ್ ಗಾಗಿ ದೇಗುಲದ ಪ್ರಾಧಿಕಾರ ಕಳೆದ 6 ತಿಂಗಳ ಹಿಂದೆ ಅರ್ಜಿ ಸಲ್ಲಿಸಿ ಲಿಖಿತ ರೂಪದಲ್ಲಿ ತೆಗೆದುಕೊಂಡ ಸುರಕ್ಷತಾ ಕ್ರಮಗಳ ಬಗ್ಗೆ ವಿವರಿಸಿತ್ತು. ಅದಾದ, ಬಳಿಕ FSSAI ಅಧಿಕಾರಿಯೊಬ್ಬರು ಕ್ಷೇತ್ರಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದರು. ಸುರಕ್ಷತೆ, ಶುದ್ಧತೆಯನ್ನು ಪರೀಕ್ಷಿಸಿದ ಬಳಿಕ ಈ ಪರವಾನಗಿ ನೀಡಲಾಗಿದೆ.