ಚಾಮರಾಜನಗರ: ಉದ್ಯಮಿವೋರ್ವ ತನ್ನ ಕುಟುಂಬದ ನಾಲ್ವರನ್ನು ಕೊಲೆ ಮಾಡಿ ತಾನೂ ಗುಂಡಿಕ್ಕಿಗೊಂಡು ಆತ್ಮಹತ್ಯೆ ಮಾಡಿಕೊಂಡಿರುವ ಪ್ರಕರಣದ ಹಿಂದೆ ಸಾಲದ ಹೊರೆ ಇತ್ತು ಎನ್ನಲಾಗುತ್ತಿದೆ. ಕಂಪನಿಯ ನಷ್ಟವೂ ಕಾರಣವಿರಬಹುದು ಎಂದು ಎಸ್ಪಿ ಆನಂದ್ ಕುಮಾರ್ ತಿಳಿಸಿದ್ದಾರೆ.
ಮೃತ ಓಂಕಾರ ಪ್ರಸಾದ್ ಕುಟುಂಬ ಮಂಗಳವಾರದಿಂದ ಎಲ್ಚೆಟ್ಟಿ ಗ್ರಾಮದ ಸ್ನೇಹಿತರ ಫಾರ್ಮ್ಹೌಸ್ನಲ್ಲಿ ಉಳಿದುಕೊಂಡಿದ್ದರು. ಗುರುವಾರ ಮಧ್ಯಾಹ್ನ ಪಟ್ಟಣದ ಮುಖ್ತಾರ್ ಮಾಂಸಾಹಾರಿ ಹೋಟೆಲ್ ನಿಂದ ಬಿರಿಯಾನಿಯನ್ನು ಪಾರ್ಸೆಲ್ ತಂದು ರಸ್ತೆಯ ಬದಿ ಊಟ ಮಾಡಿ ಹೋಗಿದ್ದರು. ಬಳಿಕ ಡ್ರೈವರ್ ಚೇತನ್ಗೆ ನೀನು ಹೋಗಿ ಸಂಜೆ ಬಾ ನಾಳೆ (ಶುಕ್ರವಾರ) ಬೆಳಗ್ಗೆ ಸೇಲಂಗೆ ಹೋಗಬೇಕು ಎಂದು ಕಳುಹಿಸಿದ್ದಾರೆ. ಸಂಜೆ ಡ್ರೈವರ್ ಬಂದಾಗ ಗುರುವಾರ ರಾತ್ರಿ ಜೊತೆಯಲ್ಲಿ ಊಟ ಮಾಡಿದ್ದಾರೆ. ಬೆಳಗ್ಗೆ ಪೋನ್ ಮಾಡುತ್ತೇನೆ ರೆಡಿ ಇರು ಎಂದು ಹೇಳಿ ಕಳುಹಿಸಿದ್ದಾರೆ.
ಮುಂಜಾನೆ 3.30ಕ್ಕೆ ಓಂಕಾರ ಪ್ರಸಾದ್ ಡ್ರೈವರ್ಗೆ ಕರೆ ಮಾಡಿ ನಾನು ಜೀವನದಲ್ಲಿ ಸೋತಿದ್ದೇನೆ, ಇನ್ನೂ ಬದುಕುವುದಿಲ್ಲ. ನಿನ್ನೆ ಮಧ್ಯಾಹ್ನ ಬಿರಿಯಾನಿ ಊಟ ಮಾಡಿದ ಜಾಗದಲ್ಲಿ ಕಾರು ನಿಲ್ಲಿಸಿದ್ದೇನೆ. ಬಂದು ತೆಗೆದುಕೊಳ್ಳಿ ಎಂದ್ಹೇಳಿ ಕರೆ ಕಟ್ ಮಾಡಿದರು ಎಂದು ಡ್ರೈವರ್ ಚೇತನ್ ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. .
ಮೃತಪಟ್ಟ ಓಂಕಾರ್ ಪ್ರಸಾದ್ ಪತ್ನಿ ನಿಖಿತಾ ಗರ್ಭಿಣಿಯಾಗಿದ್ದರು ಎಂದು ತಿಳಿದು ಬಂದಿದೆ. ತಾತನ ತೆಕ್ಕೆಯಲ್ಲಿ ಮಲಗಿದ್ದ ಮಗ ಆರ್ಯನ್ಗೂ ಕೂಡ ಹಣೆಗೆ ಗುಂಡಿಕ್ಕಿ ಓಂಕಾರ್ ಪ್ರಸಾದ್ ಕೊಂದಿದ್ದಾರೆ. ಓಂಕಾರ್ ಪ್ರಸಾದನಿಗೆ ಮೂರು ಮಂದಿ ಗನ್ ಮ್ಯಾನ್ ಇದ್ದರು ಎನ್ನಲಾಗಿದ್ದು, ಓರ್ವ ಗನ್ ಮ್ಯಾನ್ ನಿಂದ ಪಿಸ್ತೂಲ್ ಪಡೆದಿದ್ದರು ಎಂದು ಮೂಲಗಳು ತಿಳಿಸಿವೆ. ಸದ್ಯ ಓರ್ವ ಗನ್ ಮ್ಯಾನನ್ನು ವಶಕ್ಕೆ ಪಡೆದು ಪೊಲೀಸರು ವಿಚಾರಣೆ ನಡೆಸುತ್ತಿದ್ದಾರೆ. ಶವಗಳನ್ನು ಮರಣೋತ್ತರ ಪರೀಕ್ಷೆಗಾಗಿ ಚಾಮರಾಜನಗರ ಜಿಲ್ಲಾಸ್ಪತ್ರೆಗೆ ರವಾನಿಸಲಾಗಿದೆ.
ಮೊದಲು ಮಗು ಆರ್ಯನ್ ಹಣೆಗೆ ಗುಂಡು ಹಾರಿಸಿರುವ ಓಂಕಾರ್ ಪ್ರಸಾದ್ ಬಳಿಕ ತಂದೆ ನಾಗರಾಜ ಭಟ್ಟಾಚಾರ್ಯ, ಸಮೀಪದಲ್ಲೇ ಇದ್ದ ಗರ್ಭಿಣಿ ಪತ್ನಿ ನಿಖಿತಾ ನಂತರ ತಾಯಿ ಹೇಮಲತಾ ಹಣೆಗೆ ಗುಂಡಿಕ್ಕಿ ಕೊಂದಿದ್ದಾರೆ. ಕೊನೆಗೆ ತಮ್ಮ ಬಾಯಿಗೆ ಗುಂಡು ಹಾರಿಸಿಕೊಂಡು ಮೃತಪಟ್ಟಿದ್ದಾನೆ. ಸಹೋದರ ಸಂಬಂಧಿಗಳು ಸ್ಥಳಕ್ಕೆ ದೌಡಾಯಿಸಿದ್ದು ಆಕ್ರಂದನ ಮುಗಿಲು ಮುಟ್ಟಿದೆ.