ಚಾಮರಾಜನಗರ: ವಿದ್ಯಾಭ್ಯಾಸದ ಮುಖ್ಯ ಘಟ್ಟವಾದ ಪಿಯುಸಿಯಲ್ಲಿ ಮುಗ್ಗರಿಸಿದ್ದ ಅರಣ್ಯ ವೀಕ್ಷಕರೊಬ್ಬರು ಬರೋಬ್ಬರಿ 8 ವರ್ಷದ ಬಳಿಕ ಪಿಯುಸಿ ಪಾಸಾಗುವ ಮೂಲಕ ಪಾಲಕರಿಗೆ ಸಿಹಿ ಸುದ್ದಿ ನೀಡಿದ್ದಾರೆ.
ಹೌದು, ಬಂಡೀಪುರ ಹುಲಿ ಸಂರಕ್ಷಿತ ಪ್ರದೇಶದ ಮದ್ದೂರು ಅರಣ್ಯ ವಲಯದಲ್ಲಿ ಫಾರೆಸ್ಟ್ ವಾಚರ್ ಆಗಿರುವ ರಾಜೇಶ್(27) ಎಂಬಾತ ಇಂಗ್ಲಿಷ್ ವಿಷಯದಲ್ಲಿ ಫೇಲ್ ಆಗಿದ್ದ. ಈ ಬಾರಿಯ ಪೂರಕ ಪರೀಕ್ಷೆಯಲ್ಲಿ ಬರೆದು ಪಿಯುಸಿ ಪಾಸಾಗುವ ಮೂಲಕ ಸಿಹಿ ಸುದ್ದಿ ನೀಡಿದ್ದಾರೆ.
ಗಿರಿಜನರಲ್ಲೇ ಎಸ್ಎಸ್ಎಲ್ಸಿ ಪಾಸಾದ ಮೊದಲ ವ್ಯಕ್ತಿ: ಮೈಸೂರಿನ ಸರಗೂರು ತಾಲೂಕಿನ ಹಿರೇಹಳ್ಳಿ ಗ್ರಾಮದ ರಾಜ-ಮಹಾದೇವಮ್ಮ ಎಂಬುವರ ಮಗನಾದ ರಾಜೇಶ್ ತಮ್ಮೂರಿನ ಗಿರಿಜನರಲ್ಲೇ ಎಸ್ಎಸ್ಎಲ್ಸಿ ಪಾಸಾದ ಮೊದಲ ವ್ಯಕ್ಯಿ. 5ರಿಂದ 10ನೇ ತರಗತಿವರೆಗೆ ಬಿಳಿಗಿರಿರಂಗನಬೆಟ್ಟದ ವಿಜಿಕೆಕೆಯಲ್ಲಿ ಓದಿ, ಬಳಿಕ ಸರಗೂರು ಕಾಲೇಜಿಗೆ ಸೇರ್ಪಡೆಯಾಗಿದ್ದ. 2011-12ರ ದ್ವಿತೀಯ ಪಿಯು ಇಂಗ್ಲಿಷ್ನಲ್ಲಿ ಅನುತ್ತೀರ್ಣಗೊಂಡು, ಪೂರಕ ಪರೀಕ್ಷೆಯಲ್ಲೂ ಫೇಲಾಗಿದ್ದ. ಅದಾದ ಬಳಿಕ ಎರಡು ವರ್ಷಗಳ ಹಿಂದೆ ವಾಚರ್ ನೌಕರಿ ಹಿಡಿದ ಬಳಿಕ ಪಾಸ್ ಮಾಡಬೇಕೆಂದು ಹಠ ತೊಟ್ಟು ಕಳೆದ ಪೂರಕ ಪರೀಕ್ಷೆಯಲ್ಲಿ ಪಾಸಾಗಿದ್ದಾರೆ.
ಸಿಲಬಸ್ ಬದಲಾಗಿದ್ದರಿಂದ ಕೀ ನೋಟ್ಸ್, ಮೊಬೈಲ್ ವಿಡಿಯೋಗಳು, ಸ್ನೇಹಿತರ ನೋಟ್ಗಳನ್ನು ಪಡೆದು ಕಾಡು ಕಾಯುವಾಗ ಬಿಡುವಿನ ವೇಳೆಯಲ್ಲಿ ಓದಿ ಪಿಯು ಪಾಸಾಗಿದ್ದಾರೆ. ಪರೀಕ್ಷೆಯಲ್ಲಿ ಫೇಲಾದರೆ ಏನೆಂಬ ಚಿಂತೆಯಿಂದ ಪರೀಕ್ಷೆ ಬರೆಯತ್ತಿರುವ ವಿಚಾರವನ್ನು ಮನೆಯವರಿಗೆ ಹೇಳದೆ ಪಾಸ್ ಆದ ಬಳಿಕ ಅಚ್ಚರಿ ಮೂಡಿಸಿದ್ದಾರೆ.
ತಾನು ಕಾಲೇಜಿಗೆ ತೆರಳುವಾಗ ಫೇಲಾದಗಲೂ ವಿದ್ಯೆಯ ಮಹತ್ವ ಅರಿತಿರಲಿಲ್ಲ. ನೌಕರಿ ಹಿಡಿದ ಬಳಿಕ ತಾನು ಓದಬೇಕಿತ್ತು ಎಂಬ ಆಸೆಯೇ ಪಿಯು ಪಾಸಾಗಲು ಕಾರಣ. ತಾಯಿ ಏನೂ ಹೇಳುತ್ತಿರಲಿಲ್ಲ. ಆದರೆ ತಂದೆ ಮಾತ್ರ ಪಿಯು ಪರೀಕ್ಷೆ ತೆಗೆದುಕೋ ಎಂದು ಹೇಳುತ್ತಿದ್ದರು. ನನಗೆ ಏನು ಓದಬೇಕು, ಮುಂದೇನು ಮಾಡಬೇಕು ಎಂದು ಮಾರ್ಗದರ್ಶನ ಮಾಡುವರಿರಲಿಲ್ಲ. ನಮ್ಮ ಗಿರಿಜನರ ಶಿಕ್ಷಣ ಪ್ರಮಾಣ ಇನ್ನೂ ಸುಧಾರಿಸಿಲ್ಲ. ಎಲ್ಲರೂ ವಿದ್ಯಾವಂತರಗಬೇಕೆಂಬುದೇ ನನ್ನಾಸೆ ಎಂದಿದ್ದಾರೆ.
ಸಾಮಾನ್ಯ ಜನರು ಪಿಯು, ಡಿಗ್ರಿ ಪಾಸಾಗುವುದರಲ್ಲಿ ಏನೂ ಆಶ್ಚರ್ಯವಿಲ್ಲ. ಆದರೆ ಕಾಡನ್ನೇ ಪ್ರಪಂಚ ಎಂದು ನಂಬಿಕೊಂಡಿದ್ದ ಓರ್ವ ಹಠ ತೊಟ್ಟು 8 ವರ್ಷಗಳ ಬಳಿಕ ಪಿಯುಸಿಯಲ್ಲಿ ಉತ್ತೀರ್ಣನಾಗಿರುವುದು ವಿಶೇಷ ಮತ್ತು ಮಾದರಿ.