ಚಾಮರಾಜನಗರ: ಕಾಡಂಚಿನ ಗ್ರಾಮಸ್ಥರು ಹಣ ಸಂಪಾದನೆಗಾಗಿ ಅರಣ್ಯದ ಮೇಲೆ ಅವಲಂಬಿಸುವುದನ್ನು ಕಡಿಮೆ ಮಾಡುವ ಉದ್ದೇಶದಿಂದ ಗ್ರಾಮದಲ್ಲೇ ಹೈನುಗಾರಿಕೆ ನಡೆಸಿ, ಉತ್ತಮ ಆದಾಯಗಳಿಸುವಂತಹ ಯೋಜನೆಯೊಂದನ್ನು ಅನುಷ್ಠಾನಕ್ಕೆ ತರಲು ಮಲೆ ಮಹದೇಶ್ವರ ವನ್ಯಧಾಮದ ಆಡಳಿತ ಮಂಡಳಿ ಮುಂದಾಗಿದೆ.
ಮಲೆಮಹದೇಶ್ವರ ವನ್ಯಜೀವಿ ಧಾಮದ ವ್ಯಾಪ್ತಿಗೆ ಒಳಪಡುವ ಪೊನ್ನಾಚಿ, ತುಳಸಿಕೆರೆ, ಇಂಡಿಗನತ್ತ, ಕೊಂಬುಡಿಕ್ಕಿ, ಮೆದಗಣಾನೆ, ಕೊಕ್ಕಬರೆ, ದೊಡ್ಡಾನೆ ಗ್ರಾಮಗಳಲ್ಲಿ ರೈತರು ಸಾಕುತ್ತಿರುವ 3 ಸಾವಿರಕ್ಕೂ ಹೆಚ್ಚಿನ ಹಳ್ಳಿಕಾರ್ ತಳಿಯ ಹಸುವಿನ ಹಾಲನ್ನು ಬಳಸಿಕೊಂಡು ದೇಸಿ ತುಪ್ಪ (ಹಳ್ಳಿಕಾರ್ ಹಸುವಿನ ತುಪ್ಪ) ತಯಾರಿಸಿ, ಬ್ರಾಂಡ್ ಮಾಡಲು ಮಲೆಮಹದೇಶ್ವರ ವನ್ಯಜೀವಿ ಧಾಮದ ಡಿಎಫ್ಒ ಏಡುಕುಂಡಲು ಮುಂದಾಗಿದ್ದಾರೆ.
ಇಲ್ಲಿನ ಜನರ ಆದಾಯ ಕಡಿಮೆ ಇರುವ ಕಾರಣ, ತುಪ್ಪ ಮಾರಾಟದಿಂದ ಇವರ ಜೀವನ ಮಟ್ಟ ಸುಧಾರಿಸಿ, ಅರಣ್ಯದ ಮೇಲಿನ ಅವಲಂಬನೆ ತಡೆಯುವಂತೆ ಮಾಡುವುದು ಅರಣ್ಯ ಇಲಾಖೆಯ ಪ್ಲಾನ್ ಆಗಿದೆ. ಹಸುಗಳನ್ನು ಕಾಡಿಗಟ್ಟುವುದನ್ನು ತಪ್ಪಿಸಲು 3-4 ಎಕರೆಯಲ್ಲಿ ಮೇವಿಗಾಗಿ ಹುಲ್ಲು ಬೆಳೆಯಲು ರೈತರಿಗೆ ಪ್ರೋತ್ಸಾಹ ಧನ ನೀಡಲು ಕ್ರಮ ಕೈಗೊಳ್ಳಲಾಗಿದೆ. ಜೊತೆಗೆ ತುಪ್ಪ ತಯಾರಿಕ ಘಟಕ ಸ್ಥಾಪಿಸಿ ಸಂಘದ ಮೂಲಕ ಮಾರಾಟ ಮಾಡುವಂತೆ ಪ್ರೇರೇಪಿಸಲಾಗುತ್ತಿದೆ.
ಈ ಕುರಿತು ಈಟಿವಿ ಭಾರತಕ್ಕೆ ಮಾಹಿತಿ ನೀಡಿದ ಮಲೆಮಹದೇಶ್ವರ ವನ್ಯಜೀವಿಧಾಮದ ಡಿಎಫ್ಒ ಏಡುಕುಂಡಲು, ಪೊನ್ನಾಚಿ ಗ್ರಾಮದಲ್ಲಿ ತುಪ್ಪದ ಘಟಕ ನಿರ್ಮಾಣ ಆಗಲಿದ್ದು ಅಂದಾಜು 20 ಲಕ್ಷ ರೂ. ವೆಚ್ಚ ಆಗಲಿದೆ. ಈ ಹಣವನ್ನು ದಾನಿಗಳು ಭರಿಸಲು ಮುಂದೆ ಬಂದಿದ್ದು, ಇನ್ನೊಂದು ತಿಂಗಳಿನಲ್ಲಿ ನಿರ್ಮಾಣ ಕಾರ್ಯ ಆರಂಭಗೊಳ್ಳಲಿದೆ. ಮಾನವ ವನ್ಯಜೀವಿ ಸಂಘರ್ಷ, ಜನರು ಹಾಗೂ ಅರಣ್ಯ ಇಲಾಖೆಯ ನಡುವಿನ ಸಂಬಂಧ ಉತ್ತಮಗೊಳಿಸಲು ಈ ಯೋಜನೆ ರೂಪಿಸಲಾಗಿದೆ. ತುಪ್ಪದ ಜೊತೆಗೆ ಹಾಲನ್ನು ಕೂಡ ಪ್ಯಾಕ್ ಮಾಡಿ ಮಾರಾಟ ಮಾಡಬಹುದಾಗಿದ್ದು, ಜನರ ತಲಾದಾಯ ಸುಧಾರಿಸಲಿದೆ ಎಂದರು.
ಒಟ್ಟಿನಲ್ಲಿ ಅರಣ್ಯವನ್ನು ಹೆಚ್ಚು ಆಶ್ರಯಿಸದೇ ಸ್ವಾವಲಂಬಿ ಜೀವನ ಸಾಗಿಸುವ ಜೊತೆಗೆ ಆದಾಯವನ್ನು ಹೆಚ್ಚಿಸಿಕೊಳ್ಳುವ ಈ ಯೋಜನೆ ಮಾದರಿ ಮತ್ತು ಪ್ರಯೋಗಾತ್ಮಕವಾಗಿದೆ.