ಚಾಮರಾಜನಗರ: ಕಬಿನಿ ಹೊರಹರಿವು ಹೆಚ್ಚಳವಾದಂತೆ ಕೊಳ್ಳೇಗಾಲ ತಾಲೂಕಿನ ಕಾವೇರಿ ನದಿಪಾತ್ರದಲ್ಲಿರುವ 6 ಗ್ರಾಮಗಳಲ್ಲಿ ಜಿಲ್ಲಾಡಳಿತ ಮುನ್ನೆಚ್ಚರಿಕೆ ವಹಿಸಿದೆ.
ಮುಳ್ಳೂರು, ಹಳೇ ಹಂಪಾಪುರ, ದಾಸನಪುರ, ಹಳೇ ಅಣಗಳ್ಳಿ, ಹರಳೆ, ಸರಗೂರು, ಧನಗೆರೆ, ಎಡಕುರಿಯ, ಸತ್ತೇಗಾಲ ಕಾವೇರಿ ನದಿ ಪಾತ್ರದಲ್ಲಿ ಬರಲಿದ್ದು ಮುಳ್ಳೂರು, ದಾಸನಪುರ, ಹಳೇ ಹಂಪಾಪುರ, ಹರಳೆ ಮತ್ತು ದ್ವೀಪ ಗ್ರಾಮವಾದ ಎಡಕುರಿಯಾ ಗ್ರಾಮಗಳು ಮುಳುಗಡೆ ಭೀತಿ ಎದುರಿಸುತ್ತಿವೆ.
ಇನ್ನು, ಜಿಲ್ಲಾಧಿಕಾರಿ ಬಿ.ಬಿ.ಕಾವೇರಿ ಹಾಗೂ ಸ್ಥಳೀಯ ಶಾಸಕ ಎನ್.ಮಹೇಶ್ ಗ್ರಾಮಗಳಿಗೆ ಭೇಟಿಯಿತ್ತು ಮುನ್ನೆಚ್ಚರಿಕೆ ಕ್ರಮ ಪರಿಶೀಲಿಸಿದ್ದಾರೆ.
ಕೋಡಿ ಬಿದ್ದ ಕೆರೆ: ಬಂಡೀಪುರ ಹುಲಿ ಸಂರಕ್ಷಿತ ಪ್ರದೇಶದ ಗೋಪಾಲಸ್ವಾಮಿ ಬೆಟ್ಟ ಅರಣ್ಯ ವಲಯದಲ್ಲಿ ಸತತ ಮಳೆ ಬೀಳುತ್ತಿರುವುದರಿಂದ ಹಿರಿಕೆರೆ ತುಂಬಿ ಕೋಡಿ ಬಿದ್ದಿದೆ.
ಹಿರಿಕೆರೆ ಕೋಡಿ ಬಿದ್ದಿರುವುದಕ್ಕೆ ರೈತರ ಮೊಗದಲ್ಲಿ ನಗು ಮೂಡಿದ್ದು, ಸುತ್ತಮುತ್ತಲಿನ ಬೆಳೆಗೆ ನೀರು ಪೂರೈಕೆ ಸಾಧ್ಯವಾಗಲಿದೆ. ಬೇರಂಬಾಡಿಯ ಕೆಂಪುಸಾಗರಕ್ಕೂ ಕೂಡ ನೀರು ಹರಿದುಬರುತ್ತಿರುವುದರಿಂದ ಕೆಂಪುಸಾಗರವೂ ಕೋಡಿ ಬೀಳುವ ನಿರೀಕ್ಷೆ ಇದೆ.
ಚಾಮರಾಜನಗರ ಜಿಲ್ಲಾದ್ಯಂತ ಬಿಡುವು ನೀಡದೇ ಸತತ ಮಳೆಯಾಗಿದ್ದು ಎರಡನೇ ದಿನವೂ ಬತ್ತೇರಿ ಮಾರ್ಗ ಕಲ್ಪಿಸುವ ಮದ್ದೂರು ಚೆಕ್ ಪೋಸ್ಟ್ ಬಂದ್ ಮಾಡಲಾಗಿತ್ತು.