ಚಾಮರಾಜನಗರ: ದಲಿತರ ಬೀದಿಯಲ್ಲೂ ಗ್ರಾಮ ದೇವತೆಯ ಉತ್ಸವ ಮೂರ್ತಿ ಮೆರವಣಿಗೆ ಹಾದು ಹೋಗಲಿ ಎಂದು ಮನವಿ ಮಾಡಿದ್ದ ಇಬ್ಬರಿಗೆ ಗ್ರಾಮಸ್ಥರು ಬರೋಬ್ಬರಿ 60,202 ರೂ. ದಂಡ ವಿಧಿಸಿದ್ದ ಘಟನೆ ಅ. 15ರಂದು ಯಳಂದೂರು ತಾಲೂಕಿನ ಹೊನ್ನೂರಿನಲ್ಲಿ ನಡೆದಿತ್ತು. ಈ ಪ್ರಕರಣ ಸದ್ಯ ಸುಖ್ಯಾಂತಗೊಂಡಿದೆ.
ಗ್ರಾಮದಲ್ಲಿರುವ ಮುಜರಾಯಿ ಇಲಾಖೆ ಅಧೀನದ ಚಾಮುಂಡೇಶ್ವರಿ ದೇವಿಯ ಮೆರವಣಿಗೆ ಪ್ರತಿ ವರ್ಷ ವಿಜಯ ದಶಮಿ ದಿನದಂದು ಕೇವಲ ಸವರ್ಣೀಯರ ಬೀದಿಯಲ್ಲಿ ಮಾತ್ರ ನಡೆಯುತ್ತಿತ್ತು. ದೇವಿಯ ಮೆರವಣಿಗೆ ದಲಿತರ ಬೀದಿಯಲ್ಲೂ ಹಾದು ಹೋಗಬೇಕು ಎಂದು ವಕೀಲ ರಾಜಣ್ಣರ ನೇತೃತ್ವದಲ್ಲಿ ನಿಂಗರಾಜು ಹಾಗೂ ಇತರರು ಜೊತೆಗೂಡಿ ತಹಶೀಲ್ದಾರ್ ಅಧ್ಯಕ್ಷತೆಯಲ್ಲಿ ನಡೆದ ಗ್ರಾಮ ದೇವತೆ ಹಬ್ಬದ ಪೂರ್ವಭಾವಿ ಸಭೆಯಲ್ಲಿ ಮನವಿ ಮಾಡಿದ್ದರು.
ದಲಿತರ ಬೀದಿಯಲ್ಲೂ ದೇವತೆ ಮೆರವಣಿಗೆ ನಡೆಸಬೇಕು ಎಂದು ತಹಶೀಲ್ದಾರ್‌ಗೆ ನೀಡಿದ್ದ ದೂರಿನ ಮಾಹಿತಿಯನ್ನು ಗ್ರಾಮ ಲೆಕ್ಕಿಗ ದೇವೇಂದ್ರ ನಾಯಕ ಗ್ರಾಮದ ಮುಖಂಡರಿಗೆ ತನ್ನ ಫೋಟೋ ಸಹಿತ ತಿಳಿಸಿದ ಪರಿಣಾಮ ಅಂದೇ ಸಭೆ ಸೇರಿದ ಗ್ರಾಮಸ್ಥರು ಅರ್ಧ ಗಂಟೆಯೊಳಗೆ ಭಾರೀ ಮೊತ್ತದ ದಂಡ ವಿಧಿಸಿದ್ದರು.
ಹೊನ್ನೂರಿನ ಗ್ರಾಮಸ್ಥರು ಅ. 15ರ ಗುರುವಾರ ರಾತ್ರಿ ಗ್ರಾಮದ ನಿಂಗರಾಜುವಿಗೆ 50,101 ರೂ. ಹಾಗೂ ಶಂಕರಮೂರ್ತಿ ಎಂಬುವರಿಗೆ 10,101 ರೂ. ದಂಡ ವಿಧಿಸಿದ್ದರು. ದಂಡದ ಹಣವನ್ನು ಅಂದೇ ಪಾವತಿಸಬೇಕು ಎಂದು ಗ್ರಾಮಸ್ಥರು ಪಟ್ಟು ಹಿಡಿದ ಹಿನ್ನೆಲೆ ನಿಂಗರಾಜು ಒಡವೆಗಳನ್ನು ಅಡವಿಟ್ಟು ತಂದು ದಂಡ ಪಾವತಿಸಿದ್ದರು. ಈ ಬಗ್ಗೆ ನಿಂಗರಾಜು ತಹಶೀಲ್ದಾರ್ ಬಳಿ ಅಳಲು ತೋಡಿಕೊಂಡಿದ್ದರು.
ದಂಡದ ಹಣ ವಾಪಸ್...
ಕಳೆದ ಸೋಮವಾರ ಯಳಂದೂರು ತಹಶೀಲ್ದಾರ್ ಬಿ.ಕೆ.ಸುದರ್ಶನ್ ಗ್ರಾಮದ ಮುಖಂಡರು ಮತ್ತು ದೂರುದಾರರು, ರೈತ ಸಂಘದ ನಾಯಕರೊಟ್ಟಿಗೆ ಸಭೆ ನಡೆಸಿದರು. ಈ ವೇಳೆ ಗ್ರಾಮದಲ್ಲಿ ಸಾಮರಸ್ಯ ಕಾಪಾಡುವಂತೆ ಮುಖಂಡರು ಹಾಗೂ ದೂರುದಾರರಿಗೆ ತಿಳಿಹೇಳಿ ಉದ್ಭವಿಸಿದ್ದ ಸಮಸ್ಯೆಯನ್ನು ಇತ್ಯರ್ಥಪಡಿಸಿದ್ದಾರೆ.
ಇನ್ನು ಗ್ರಾಮದ ವಿವಿಧ ಕೋಮಿನ ಯಜಮಾನರು ಸೇರಿ ವಿಧಿಸಿದ್ದ ದಂಡದ ಹಣವನ್ನು ನಿಂಗರಾಜು ಮತ್ತು ಶಂಕರಮೂರ್ತಿಗೆ ವಾಪಸ್ ನೀಡಿದ್ದಾರೆ. ಅಲ್ಲದೆ ಗ್ರಾಮ ದೇವತೆಯ ಮೂರ್ತಿಯ ಮೆರವಣಿಗೆ ವಿಚಾರವನ್ನು ತಹಶೀಲ್ದಾರ್ ಹಾಗೂ ಪೊಲೀಸ್ ಇಲಾಖೆ ಅಧಿಕಾರಿಗಳು ಬಗೆಹರಿಸುವುದಾಗಿ ತಿಳಿಸಿರುವುದರಿಂದ ದೂರನ್ನು ಹಿಂಪಡೆದಿದ್ದೇನೆ ಎಂದು ನಿಂಗರಾಜು ತಿಳಿಸಿದ್ದಾರೆ.