ಚಾಮರಾಜನಗರ: ಹನೂರು ತಾಲೂಕಿನ ಆನೆಗುಂದಿ ಗ್ರಾಮದ ಜಮೀನೊಂದರಲ್ಲಿ ಅರಿಶಿಣ ಬೆಳೆಯ ಮಧ್ಯೆ ಬೆಳೆಯಲಾಗಿದ್ದ ಗಾಂಜಾ ಗಿಡಗಳನ್ನು ಹನೂರು ಪೊಲೀಸರು ವಶಕ್ಕೆ ಪಡೆದು ಪ್ರಕರಣ ದಾಖಲಿಸಿದ್ದಾರೆ. ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಹನೂರು ತಾಲೂಕಿನ ಆನೆಗುಂದಿ ಗ್ರಾಮದ ಎಸ್ ಬಾಲು (65) ಹಾಗೂ ಇವರ ಮಗ ಮಹಾಲಿಂಗ (35) ರನ್ನು ಪೊಲೀಸರು ಬಂಧಿಸಿದ್ದಾರೆ.
ಹನೂರು ಪೊಲೀಸ್ ಠಾಣಾ ವ್ಯಾಪ್ತಿಯ ಆನೆಗುಂದಿ ಗ್ರಾಮದ ಜಮೀನೊಂದರಲ್ಲಿ ಅಕ್ರಮ ಗಾಂಜಾ ಗಿಡಗಳನ್ನು ಬೆಳೆದಿದ್ದರು. ಇದರ ಖಚಿತ ಮಾಹಿತಿ ಮೇರೆಗೆ ಹನೂರು ಪೊಲೀಸರು ದಾಳಿ ನಡೆಸಿ ಅರಿಶಿಣ ಬೆಳೆಯ ಮಧ್ಯೆ ಬೆಳೆಯಲಾಗಿದ್ದ ಸುಮಾರು 2 ಲಕ್ಷ ಮೌಲ್ಯದ 95 ಗಾಂಜಾ (34 ಕೆಜಿ) ಗಿಡಗಳನ್ನು ವಶಕ್ಕೆ ಪಡೆದಿದ್ದಾರೆ. ಬಂಧಿತ ಆರೋಪಿಗಳಾದ ಬಾಲು ಹಾಗೂ ಮಹಾಲಿಂಗರನ್ನು ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿದೆ.
ಪ್ರತ್ಯೇಕ ಘಟನೆ- ಪಿಕ್ ಅಪ್ ಡಿಕ್ಕಿ, ಸವಾರ ಸಾವು: ಪಿಕ್ ಅಪ್ ವಾಹನ ಹಾಗೂ ಬೈಕ್ ನಡುವೆ ಅಪಘಾತ ಸಂಭವಿಸಿದ ಪರಿಣಾಮ ಬೈಕ್ ಸವಾರ ಸ್ಥಳದಲ್ಲೇ ಸಾವನ್ನಪ್ಪಿರುವ ಘಟನೆ ಗುಂಡ್ಲುಪೇಟೆ ತಾಲೂಕಿನ ಶಿಂಡನಪುರ ಗ್ರಾಮದ ಬಳಿ ರಾಜ್ಯ ಹೆದ್ದಾರಿ-81 ರಲ್ಲಿ ಶುಕ್ರವಾರ ತಡರಾತ್ರಿ ನಡೆದಿದೆ.
ಮೃತರನ್ನು ಗುಂಡ್ಲುಪೇಟೆ ತಾಲೂಕಿನ ಕಡತಾಳಕಟ್ಟೆಹುಂಡಿ (ಮೂಡಲಹುಂಡಿ) ಗ್ರಾಮದ ಮಹೇಂದ್ರ (37) ಎಂದು ಗುರುತಿಸಲಾಗಿದೆ. ಮಹೇಂದ್ರ ಅವರು ಗುಂಡ್ಲುಪೇಟೆಯಲ್ಲಿ ವೈಯಕ್ತಿಕ ಕೆಲಸ ಮುಗಿಸಿ ಊರಿಗೆ ವಾಪಸಾಗುತ್ತಿದ್ದರು. ಈ ವೇಳೆ ತೆರಕಣಾಂಬಿ ಕಡೆಯಿಂದ ಬಾಳೆಕಾಯಿ ತುಂಬಿದ್ದ ಪಿಕ್ ಅಪ್ ವಾಹನ ಹಾಗೂ ಬೈಕ್ ನಡುವೆ ಡಿಕ್ಕಿ ಸಂಭವಿಸಿದೆ. ಘಟನೆಯಲ್ಲಿ ಬೈಕ್ ಸವಾರನಿಗೆ ಕಾಲು ಮುರಿದು, ತಲೆಗೆ ತೀವ್ರ ಪೆಟ್ಟು ಬಿದ್ದ ಪರಿಣಾಮ ಸ್ಥಳದಲ್ಲೇ ಸಾವನ್ನಪ್ಪಿದ್ದಾರೆ. ಈ ಘಟನೆ ಕುರಿತು ಗುಂಡ್ಲುಪೇಟೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಪೊಲೀಸರು ಮುಂದಿನ ಕ್ರಮ ಕೈಗೊಂಡಿದ್ದಾರೆ.
ಓದಿ: ಗಂಗಾವತಿ: ರಾತ್ರೋರಾತ್ರಿ ಹೊತ್ತಿ ಉರಿದ ಜ್ಯುವೆಲರಿ, ಅಪಾರ ಪ್ರಮಾಣದ ಚಿನ್ನ ಸುಟ್ಟು ಕರಗಿರುವ ಶಂಕೆ