ಕೊಳ್ಳೇಗಾಲ (ಚಾಮರಾಜನಗರ): ಅತ್ತೆ ಮಾಡಿದ ಸಾಲಕ್ಕೆ ಅಳಿಯನ ಮೇಲೆ ಏಕಾಏಕಿ ಮಾರಣಾಂತಿಕ ಹಲ್ಲೆ ಮಾಡಿರುವ ಘಟನೆ ಕೊಳ್ಳೇಗಾಲ ತಾಲೂಕಿನ ಪಾಳ್ಯ ಗ್ರಾಮದಲ್ಲಿ ನಡೆದಿದೆ.
ಪಾಳ್ಯ ಗ್ರಾಮದ ನಿಂಗರಾಜು ಹಲ್ಲೆಗೊಳಗಾದ ವ್ಯಕ್ತಿ. ನಿಂಗರಾಜು ಬಸ್ ನಿಲ್ದಾಣದಲ್ಲಿ ನಿಂತಿದ್ದಾಗ ಬಂದ ಗೋವಿಂದರಾಜು ಎಂಬ ವ್ಯಕ್ತಿ, ನಿನ್ನ ಅತ್ತೆ ಸಿದ್ದರಾಜಮ್ಮ ಸಾಲ ಪಡೆದು ಇನ್ನೂ ಕೊಟ್ಟಿಲ್ಲ. ಅಸಲಿಗೆ ಬಡ್ಡಿಯನ್ನೂ ನೀಡಿಲ್ಲ. ನೀನು ಹೇಳಬೇಕು ತಾನೇ ಎಂದು ಅವಾಚ್ಯ ಶಬ್ಧಗಳಿಂದ ನಿಂದಿಸಿದ್ದಾನೆ. ಅತ್ತೆ ಸಾಲ ಪಡೆದಿರುವ ಬಗ್ಗೆ ನನಗೆ ಗೊತ್ತಿಲ್ಲ ಎಂದಾಗ, ಗೋವಿಂದರಾಜು ಮೇಲೆ ಏಕಾಏಕಿ ಮಾರಣಾಂತಿಕ ಹಲ್ಲೆ ನಡೆಸಲಾಗಿದೆ ಎನ್ನಲಾಗಿದೆ.
ಘಟನೆಯಲ್ಲಿ ನಿಂಗರಾಜು ತಲೆಗೆ ಗಂಭೀರ ಗಾಯಗಳಾಗಿದ್ದು, ಚಿಕಿತ್ಸೆಗಾಗಿ ಕೊಳ್ಳೇಗಾಲ ಆಸ್ಪತ್ರೆಗೆ ದಾಖಲಿಸಲಾಗಿದೆ. ಹಲ್ಲೆಗೆ ರಾಜಕೀಯ ವೈಷ್ಯಮ್ಯವೇ ಕಾರಣ ಎನ್ನಲಾಗಿದ್ದು, ಈ ಬಗ್ಗೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿಲ್ಲ.