ಚಾಮರಾಜನಗರ: ದಸರಾ ಉಪ ಸಮಿತಿ ವತಿಯಿಂದ ಜಿಲ್ಲೆಯಲ್ಲಿ ರೈತ ದಸರಾ ಕಾರ್ಯಕ್ರಮವನ್ನು ಸಂಭ್ರಮದಿಂದ ಆಚರಿಸಲಾಯಿತು. ಇದೇ ವೇಳೆ ನೆರೆ ಪರಿಹಾರಕ್ಕೆ ಆಗ್ರಹಿಸಿ ರೈತ ಸಂಘಟನೆಗಳು ಪ್ರತಿಭಟನೆ ನಡೆಸಿದವು.
ಸಂಭ್ರಮದ ರೈತ ದಸರಾವನ್ನು ಶಾಸಕ ನಿರಂಜನ ಕುಮಾರ್ ಉದ್ಘಾಟಿಸಿದರು. ಈ ವೇಳೆ ಜಿಲ್ಲಾಧಿಕಾರಿ ಬಿ.ಬಿ.ಕಾವೇರಿ ಇನ್ನಿತರರು ಉಪಸ್ಥಿತರಿದ್ದರು. ಉತ್ಸವದ ವೇಳೆ ಚಾಮರಾಜೇಶ್ವರ ದೇಗುಲ ಮುಂಭಾಗದಿಂದ ಅಲಂಕೃತ ಎತ್ತಿನ ಬಂಡಿಗಳ ಮೆರವಣಿಗೆ ನಡೆಯಿತು. ಜೆ.ಹೆಚ್.ಪಟೇಲ್ ಸಭಾಂಗಣದ ವೇದಿಕೆಯನ್ನು ಕೃಷಿ ಪರಿಕರಗಳು, ರಾಶಿಯಿಂದ ಅಲಂಕೃತಗೊಳಿಸಿದ್ದು ಎಲ್ಲರ ಗಮನ ಸೆಳೆಯಿತು.
ರೈತ ದಸರಾದ ಪ್ರಧಾನ ಭಾಷಣಕಾರರಾಗಿ ಕೃಷಿ ವಿಜ್ಞಾನಿ ಎಲ್ಲಪ್ಪ ರೆಡ್ಡಿ ಮಾತನಾಡಿ, ಕೋಟ್ಯಂತರ ವರ್ಷಗಳ ಇತಿಹಾಸ ಹೊಂದಿರುವ ಭೂಮಿಯನ್ನು ರಾಸಾಯನಿಕಗಳ ಮೂಲಕ ಕೊಲ್ಲುತ್ತಾ ಬದುಕುತ್ತಿದ್ದೇವೆ. ಪುರಾತನ ಕಲ್ಲಿನ ಪದರಗಳನ್ನು ನಾಶ ಮಾಡುತ್ತಿದ್ದೇವೆ. ಒಂದಿಂಚು ಮಣ್ಣು ರಚನೆಯಾಗಲೂ ಕೋಟ್ಯಂತರ ವರ್ಷಗಳೇ ಬೇಕು ಎಂಬುದನ್ನು ಮರೆತಿದ್ದೇವೆ. ಇನ್ನು ಮರ, ಗಿಡ, ಹುಲ್ಲುಗಳನ್ನು ನಾಶ ಮಾಡುತ್ತಿದ್ದು, ಫಲವತ್ತಾದ ಕೆಂಪು ಮಣ್ಣು ಮಳೆ ಬಂದರೆ ಕೊಚ್ಚಿ ಹೋಗುತ್ತಿದೆ ಎಂದು ಆತಂಕ ವ್ಯಕ್ತಪಡಿಸಿದರು.
ಇದೇ ವೇಳೆ ಮಣ್ಣು ಮತ್ತು ನೀರಿನ ಬಗ್ಗೆ ಪ್ರಾಧ್ಯಾಪಕ ತಿಮ್ಮೇಗೌಡ, ರೇಷ್ಮೆ ಕೃಷಿ ಕುರಿತು ರೇಷ್ಮೆ ಇಲಾಖೆಯ ನಿವೃತ್ತ ಜಂಟಿ ನಿರ್ದೇಶಕ ಶ್ರೀಕಂಠಸ್ವಾಮಿ, ಸಿರಿಧಾನ್ಯಗಳ ಬಗ್ಗೆ ನಿರಂಜನಮೂರ್ತಿ ವಿಚಾರ ಮಂಡಿಸಿದರು.
ಪ್ರತಿಭಟನೆ ಬಿಸಿ:
ಉತ್ತರ ಕರ್ನಾಟಕಕ್ಕೆ ನೆರೆ ಪರಿಹಾರ ನೀಡದೆ ರೈತ ದಸರಾ ಕಾರ್ಯಕ್ರಮ ಆಯೋಜಿಸಿರುವುದನ್ನು ಖಂಡಿಸಿ ರೈತ ಸಂಘದ ಕಾರ್ಯಕರ್ತರು ಪ್ರತಿಭಟನೆ ನಡೆಸಿದರು. ಭುವನೇಶ್ವರಿ ವೃತ್ತ, ಜಿಲ್ಲಾಡಳಿತ ಭವನ ಆವರಣದಲ್ಲಿ ಕೇಂದ್ರ ಸರ್ಕಾರದ ವಿರುದ್ಧ ನಿರ್ಲಕ್ಷ್ಯ ಧೋರಣೆ ಖಂಡಿಸಿ ಘೋಷಣೆ ಕೂಗಿದರು. ಅಷ್ಟೇ ಅಲ್ಲದೆ, ಪ್ರಧಾನಿ ನರೇಂದ್ರ ಮೋದಿ, ಗೃಹ ಸಚಿವ ಅಮಿತ್ ಶಾ, ಸ್ಥಳೀಯ ಶಾಸಕ ನಿರಂಜನ ಕುಮಾರ್ ವಿರುದ್ಧ ಘೋಷಣೆ ಕೂಗಿ ಆಕ್ರೋಶ ಹೊರಹಾಕಿದರು.