ಚಾಮರಾಜನಗರ: ಕಾವೇರಿ ನೀರಾವರಿ ನಿಗಮದ ಅಧಿಕಾರಿಗಳು ಸುಖಾಸುಮ್ಮನೆ ತೊಂದರೆ ನೀಡುತ್ತಿದ್ದಾರೆ ಎಂದು ಆರೋಪಿಸಿರುವ ಜಿಲ್ಲೆಯ ಕೆಲ ರೈತ ಕುಟುಂಬಗಳು, ತಮಗೆ ದಯಾಮರಣ ಕೊಡಿ ಎಂದು ರಾಷ್ಟ್ರಪತಿ ಅವರಿಗೆ ಮನವಿ ಪತ್ರ ಸಲ್ಲಿಸಿವೆ.
ಚಾಮರಾಜನಗರ ತಾಲೂಕಿನ ಕೋಡಿಮೋಳೆ ಗ್ರಾಮದ ನಂಜಪ್ಪ, ಕೆ.ಸಿ.ನಾಗರಾಜು, ಸಂಪತ್ ಕುಮಾರ್, ಸಿ.ಮಹೇಶ್ ಕುಮಾರ್, ಮಂಜುಕುಮಾರ್ ಕುಟುಂಬದ 21 ಮಂದಿ ಚಾಮರಾಜನಗರದ ತಹಶೀಲ್ದಾರ್ ಮೂಲಕ ರಾಷ್ಟ್ರಪತಿ, ಮಾನವ ಹಕ್ಕು ಆಯೋಗ, ರಾಜ್ಯ ಸರ್ಕಾರಕ್ಕೆ ಮನವಿ ಸಲ್ಲಿಸಿದ್ದು ನ್ಯಾಯ ಕೊಡಿಸಿ ಇಲ್ಲವೇ, ದಯಾಮರಣ ಕೊಡಿ ಎಂದು ಮನವಿ ಮಾಡಿದ್ದಾರೆ.
ರೈತರ ಅಳಲೇನು?:
ಕೆರೆ ತುಂಬಿಸುವ ಯೋಜನೆಯಡಿ ಈ ಐವರು ರೈತರ ಜಮೀನಿನಲ್ಲಿ ಬೃಹತ್ ಗಾತ್ರದ ವಿದ್ಯುತ್ ಕಂಬ ಅಳವಡಿಸಲು ಕಾವೇರಿ ನೀರಾವರಿ ನಿಗಮದ ಅಧಿಕಾರಿಗಳು ಮುಂದಾಗಿದ್ದಾರೆ ಎನ್ನಲಾಗ್ತಿದೆ. ಆದರೆ, ವಿದ್ಯುತ್ ಕಂಬ ಅಳವಡಿಸಲು ಯಾವುದೇ ನೋಟಿಸ್ ನೀಡದೇ, ರೈತರ ಗಮನಕ್ಕೆ ತಾರದೆ ದಬ್ಬಾಳಿಕೆ ನಡೆಸುತ್ತಿದ್ದಾರೆ. ಜಾಗ ಬಿಟ್ಟುಕೊಡದಿದ್ದರೆ ಸರ್ಕಾರಿ ಕರ್ತವ್ಯಕ್ಕೆ ಅಡ್ಡಿ ಪ್ರಕರಣ ದಾಖಲಿಸುವುದಾಗಿ ಹೆದರಿಸುತ್ತಿದ್ದಾರೆ ಎಂದು ರೈತರು ಆರೋಪಿಸಿದ್ದಾರೆ.
ಬೃಹತ್ ವಿದ್ಯುತ್ ಲೈನ್ಗಳನ್ನು ಜಮೀನುಗಳ ಮೇಲೆ ಎಳೆದರೆ ಕಬ್ಬು, ನೇಂದ್ರ ಬಾಳೆ ಸೇರಿದಂತೆ ಹಲವು ವಾಣಿಜ್ಯ ಬೆಳೆಗಳನ್ನು ಬೆಳೆಯಲಾಗುವುದಿಲ್ಲ. ಈ ಹಿಂದೆ, ಪೈಪ್ಲೈನ್ ಮಾಡಿದಾಗಲೂ ಜಮೀನು ಭೂಮಿಯನ್ನು ಪಡೆದು, ಇದುವರೆಗೂ ಪರಿಹಾರ ಕೊಟ್ಟಿಲ್ಲ. ಈಗಲೂ ಅದೇ ದಬ್ಬಾಳಿಕೆಯನ್ನು ಅಧಿಕಾರಿಗಳು ಮುಂದುವರೆಸುತ್ತಿದ್ದಾರೆ. ತಮಗೆ ಬೇರೆ ಜಮೀನು ಕೊಡಿ, ಇಲ್ಲವೇ ಪರಿಹಾರವನ್ನಾದರೂ ಕೊಡಿಸಿ. ಇವೆರಡೂ ಆಗದಿದ್ದರೆ ದಯಾಮರಣ ಕೊಡಿ ಎಂದು ಐದು ಕುಟುಂಬಗಳ 21 ಮಂದಿ ಅರ್ಜಿ ಸಲ್ಲಿಸಿದ್ದಾರೆ.