ಚಾಮರಾಜನಗರ: ನಡು ರಸ್ತೆಯಲ್ಲಿ ಪೆಟ್ರೋಲ್ ಸುರಿದುಕೊಂಡು ರೈತರೊಬ್ಬರು ಆತ್ಮಹತ್ಯೆಗೆ ಯತ್ನಿಸಿರುವ ಘಟನೆ ಇಂದು ಮಧ್ಯಾಹ್ನ ನಗರದ ಭುವನೇಶ್ವರಿ ವೃತ್ತದಲ್ಲಿ ನಡೆದಿದೆ.
ಚಾಮರಾಜನಗರ ತಾಲೂಕಿನ ಹೆಗ್ಗೋಠಾರ ಗ್ರಾಮದ ರೈತ ಶಿವಣ್ಣ ಆತ್ಮಹತ್ಯೆಗೆ ಯತ್ನಿಸಿದವರು. ಇವರ ಜಮೀನಿನಲ್ಲಿ ಓಡಾಡಲು ಜಾಗ ಬಿಡುವಂತೆ ಪಕ್ಕದ ಜಮೀನು ಮಾಲೀಕ ನಿರಂತರ ಕಿರುಕುಳ ನೀಡಿದ್ದರು. ಅಲ್ಲದೇ, ಬೆಳೆ ನಾಶ ಪಡಿಸಿದ್ದರಿಂದ ಬೇಸತ್ತು ಆತ್ಮಹತ್ಯೆಗೆ ಯತ್ನಿಸಿದ್ದಾರೆ ಎಂದು ತಿಳಿದು ಬಂದಿದೆ.
ಕಿರುಕುಳದ ಬಗ್ಗೆ ಪೊಲೀಸರಿಗೆ ದೂರು ನೀಡಿದರೂ ಯಾವುದೇ ಪ್ರಯೋಜನ ಆಗದಿದ್ದರಿಂದ ಆತ್ಮಹತ್ಯೆಗೆ ಮುಂದಾಗಿದ್ದರು ಎನ್ನಲಾಗಿದೆ. ಕಳೆದ ಒಂದು ವರ್ಷದಿಂದ ಪಕ್ಕದ ಜಮೀನಿನ ಮಾಲೀಕ ನಿತ್ಯ ಕಿರುಕುಳ ಕೊಟ್ಟರೂ ಕೆಲ ಪ್ರಭಾವಿಗಳ ಕುಮ್ಮಕ್ಕಿನಿಂದ ಯಾವುದೇ ಕಾನೂನು ಕ್ರಮ ಜರುಗಿಸಿಲ್ಲ ಎಂಬ ಆರೋಪವೂ ಕೇಳಿ ಬಂದಿದೆ.
ಸದ್ಯ, ಇದ್ದಕ್ಕಿದ್ದಂತೆ ಪೆಟ್ರೊಲ್ ಸುರಿದುಕೊಳ್ಳುತ್ತಿದ್ದನ್ನು ಗಮನಿಸಿದ ಕರ್ತವ್ಯ ನಿರತ ಪೊಲೀಸರು ಎಚ್ಚೆತ್ತು ವ್ಯಕ್ತಿ ಮೇಲೆ ನೀರು ಸುರಿದು ಮುಂದಿನ ಅನಾಹುತ ತಪ್ಪಿಸಿದ್ದಾರೆ. ಆತ್ಮಹತ್ಯೆಗೆ ಯತ್ನಿಸಿದ ಶಿವಣ್ಣನನ್ನು ಡಿವೈಎಸ್ಪಿ ಕಚೇರಿಗೆ ಕರೆದೊಯ್ದಿದ್ದಾರೆ.