ಚಾಮರಾಜನಗರ: ಅಭಿಮಾನಿಗಳ ಆರಾಧ್ಯ ದೈವ ಪವರ್ ಸ್ಟಾರ್ ಪುನೀತ್ ರಾಜ್‍ಕುಮಾರ್ ಹುಟ್ಟುಹಬ್ಬದ ಪ್ರಯುಕ್ತ ಅಭಿಮಾನಿಯೊಬ್ಬರು ತಮ್ಮ ಸಲೂನಿನಲ್ಲಿ ಉಚಿತವಾಗಿ ಹೇರ್ ಕಟಿಂಗ್ ಹಾಗೂ ಶೇವಿಂಗ್ ಮಾಡುವ ಮೂಲಕ ಬರ್ಥ್ ಡೇ ಆಚರಿಸಲು ಮುಂದಾಗಿದ್ದಾರೆ.
ಜಿಲ್ಲೆಯ ರಾಮಸಮುದ್ರದಲ್ಲಿರುವ ನ್ಯೂಲುಕ್ ಮೆನ್ಸ್ ಪಾರ್ಲರ್ ನಲ್ಲಿ ನೆಚ್ಚಿನ ನಟನಿಗೆ ನಮನ ಸಲ್ಲಿಸಲು ಸಲೂನ್ ಮಾಲೀಕ ಮಧು ಮುಂದಾಗಿದ್ದು, ಎಷ್ಟೇ ಮಂದಿ ಬಂದರೂ ಅವರು ಇಚ್ಛಿಸಿದ ಶೈಲಿಯಲ್ಲಿ ಉಚಿತವಾಗಿ ಹೇರ್ ಕಟಿಂಗ್ ಮತ್ತು ಶೇವಿಂಗ್ ಮಾಡುವುದಾಗಿ ಹೇಳಿದ್ದಾರೆ. ಅಪ್ಪು ಅಭಿಮಾನಿಗಳು ಹೆಚ್ಚಿನ ಸಂಖ್ಯೆಯಲ್ಲಿ ಬರಬೇಕೆಂದು ಇದೇ ವೇಳೆ ಮನವಿ ಮಾಡಿದ್ದಾರೆ.
ಮಧು ಅವರು ಪುನೀತ್ ರಾಜ್ ಕುಮಾರ್ ಅವರ ಅಪ್ಪಟ ಅಭಿಮಾನಿಯಾಗಿದ್ದು ತಮ್ಮ ಸಲೂನ್ ನಲ್ಲಿ ನೆಚ್ಚಿನ ನಟನ ಫೋಟೋಗಳನ್ನು ಹಾಕಿದ್ದಾರೆ. ಇದೇ ಮೊದಲ ಬಾರಿಗೆ ನೆಚ್ಚಿನ ನಟನ ಹುಟ್ಟುಹಬ್ಬವನ್ನು ವಿಶೇಷವಾಗಿ ಆಚರಿಸಲು ಮಧು ಅವರು ನಿರ್ಧರಿಸಿದ್ದಾರೆ.
'ಜೇಮ್ಸ್' ಚಿತ್ರದ ಟಿಕೇಟ್ ಗೆ ಮುಗಿಬಿದ್ದ ಅಭಿಮಾನಿಗಳು: ಪವರ್ ಸ್ಟಾರ್ ಪುನೀತ್ ಅಭಿನಯದ ಕೊನೆಯ ಚಿತ್ರ ಜೇಮ್ಸ್ ನಾಳೆಯಿಂದ ರಾಜ್ಯಾದ್ಯಂತ ತೆರೆ ಕಾಣಲಿದ್ದು, ಕೊಳ್ಳೇಗಾಲದ ಎರಡು ಚಿತ್ರ ಮಂದಿರಗಳಲ್ಲಿ ಜೇಮ್ಸ್ ರಿಲೀಸ್ ಆಗಲಿದೆ. ನಗರದ ಕೃಷ್ಣ ಚಿತ್ರ ಮಂದಿರ ಮತ್ತು ಶಾಂತಿ ಟಾಕೀಸ್ ನಲ್ಲಿ ಜೇಮ್ಸ್ ಸಿನೆಮಾ ಪ್ರದರ್ಶಿಸಲಾಗುತ್ತಿದ್ದು, ಪುನೀತ್ ರಾಜ್ ಕುಮಾರ್ ನಟನೆಯ ’ಜೇಮ್ಸ್’ ಕ್ರೇಜ್ ಹೆಚ್ಚಾಗಿದೆ.
ಶಾಂತಿ ಚಿತ್ರ ಮಂದಿರದಲ್ಲಿ ನಾಳಿನ ಫಸ್ಟ್ ಷೋ ಪ್ರವೇಶಕ್ಕೆ ಇಂದೇ ಟಿಕೇಟ್ ನೀಡಲಾಗಿದ್ದು, ಅಭಿಮಾನಿಗಳು ಟಿಕೇಟ್ ಗಾಗಿ ಮುಗಿಬಿದ್ದ ಪ್ರಸಂಗ ನಡೆಯಿತು. ಈ ವೇಳೆ ಮುಗಿ ಬಿದ್ದವರನ್ನು ನಿಯಂತ್ರಿಸಲು ಪೊಲೀಸರು ಹರಸಾಹಸಪಟ್ಟರು.
ಜೋರಾಗಿದೆ ಜೇಮ್ಸ್ ಹವಾ: ಇನ್ನು ಜಿಲ್ಲೆಯ ಚಿತ್ರಮಂದಿರಗಳಲ್ಲಿ ಜೇಮ್ಸ್ ಹವಾ ಜೋರಾಗಿದ್ದು, ಇಂದು ಬೆಳಗ್ಗೆಯಿಂದಲೇ ಟಿಕೇಟ್ ಪಡೆಯಲು ಅಭಿಮಾನಿಗಳು ಮುಗಿಬಿದ್ದಿದ್ದಾರೆ. ಜೊತೆಗೆ ಅಪ್ಪು ಅಭಿಮಾನಿಗಳು ಪುನೀತ್ ಅವರ ಭಾವಚಿತ್ರ ಹಿಡಿದು ಜಾನಪದ ಕಲಾತಂಡಗಳೊಂದಿಗೆ ನಗರದ ವಿವಿಧ ರಸ್ತೆಗಳಲ್ಲಿ ಮೆರವಣಿಗೆ ನಡೆಸಿ ಅಭಿಮಾನ ಮೆರೆದಿದ್ದಾರೆ.