ಚಾಮರಾಜನಗರ : ರಾತ್ರಿ ಸಂಚಾರ ನಿಷೇಧದ ಬಳಿಕ ಬಂಡೀಪುರ ರಸ್ತೆ ಮತ್ತೊಂದು ವಿಚಾರಕ್ಕೆ ಸುದ್ದಿಯಾಗಿದೆ. ರಾಷ್ಟ್ರೀಯ ಹೆದ್ದಾರಿ 766 ಬಂಡೀಪುರದಿಂದ ಕೇರಳ ಮತ್ತು ತಮಿಳುನಾಡಿಗೆ ಸಂಪರ್ಕ ಕಲ್ಪಿಸುವ ರಸ್ತೆಯನ್ನು ಅಗಲೀಕರಣಗೊಳಿಸಿ ರಸ್ತೆ ವಿಭಜಕಗಳನ್ನು ಅಳವಡಿಸಬೇಕೆಂದು ಪ್ರಧಾನಿ ಅವರಿಗೆ ಮನವಿ ಮಾಡಿದ್ದ ಗುಂಡ್ಲುಪೇಟೆ ಶಾಸಕ ನಿರಂಜನ ಕುಮಾರ್ ನಡೆಗೆ ಪರಿಸರ ಹೋರಾಟಗಾರರು ಆಕ್ಷೇಪ ವ್ಯಕ್ತಪಡಿಸಿದ್ದಾರೆ.
ರಾಷ್ಟ್ರೀಯ ಹೆದ್ದಾರಿ ಸಂಖ್ಯೆ 766 ಬಂಡೀಪುರ ಮೂಲಕ ಕೇರಳ ಮತ್ತು ತಮಿಳುನಾಡಿಗೆ ಸಂಪರ್ಕ ಕಲ್ಪಿಸುವ ರಸ್ತೆಯಾಗಿದ್ದು, ಇಲ್ಲಿ ವಾಹನ ದಟ್ಟಣೆಯಿಂದಾಗಿ ಅಪಘಾತಗಳು ಹೆಚ್ಚಾಗುತ್ತಿವೆ. ಹಾಗಾಗಿ ರಸ್ತೆ ಅಗಲೀಕರಣಗೊಳಿಸಿ ರಸ್ತೆ ವಿಭಜಕವನ್ನು ಅಳವಡಿಸಬೇಕು. ಈ ಸಂಬಂಧ ಸಾರ್ವಜನಿಕರು ಒತ್ತಡ ಹೇರುತ್ತಿದ್ದಾರೆ ಎಂದು ಪ್ರಧಾನಿ ಮೋದಿ ಅವರಿಗೆ ಶಾಸಕ ನಿರಂಜನ ಕುಮಾರ ಮನವಿ ಪತ್ರವನ್ನು ಸಲ್ಲಿಸಿದ್ದರು. ಶಾಸಕ ನಿರಂಜನಕುಮಾರ್ ಮನವಿಗೆ ಪರಿಸರ ಪ್ರೇಮಿಗಳು ತೀವ್ರ ಕಳವಳ ವ್ಯಕ್ತಪಡಿಸಿದ್ದು, ಬಂಡೀಪುರ ವನ್ಯಜೀವಿಗಳ ಸೂಕ್ಷ್ಮ ಪ್ರದೇಶ. ಕಾಡಿನಲ್ಲಿ ರಸ್ತೆ ವಿಭಜಕ ಅಳವಡಿಸುವ ಮನವಿ ತೀರಾ ಅವೈಜ್ಞಾನಿಕ ಎಂದು ಹೇಳಿದ್ದಾರೆ.
ರಾತ್ರಿ ಸಂಚಾರ ಆರಂಭಿಸುವ ಕ್ರಮಕ್ಕೆ ಶಾಸಕ ನಿರಂಜನ್‌ಕುಮಾರ್ ಅವರು ತೀವ್ರ ವಿರೋಧ ವ್ಯಕ್ತಪಡಿಸಿದ್ದರು. ಬಂಡೀಪುರ ಹುಲಿ ಸಂರಕ್ಷಿತ ಪ್ರದೇಶವಾದ್ದರಿಂದ ರಸ್ತೆ ವಿಭಜಕವನ್ನು ಅಳವಡಿಸುವುದು ಸರಿಯಲ್ಲ. ಅಪಘಾತ ಉಂಟಾಗುವುದು ಅಜಾಗರೂಕ ಚಾಲನೆಯಿಂದಾಗಿ. ಈ ಬಗ್ಗೆ ಜಾಗೃತಿ ಮೂಡಿಸಲಿ. ಕಾಡು ಪ್ರದೇಶ ಪ್ರವೇಶಕ್ಕೂ ಮುನ್ನ ಬೇಕಾದರೇ ವಿಭಜಕ ಅಳವಡಿಸಿಕೊಳ್ಳಲಿ. ಅದು ಬಿಟ್ಟು ಕಾಡಿನ ರಸ್ತೆಯಲ್ಲಿ ವಿಭಜಕ ಅಳವಡಿಸಿ, ರಸ್ತೆ ಅಗಲೀಕರಣ ಮಾಡುವುದು ಸರಿಯಲ್ಲ ಎಂದು ಪರಿಸರ ಹೋರಾಟಗಾರ ಜೋಸೆಫ್ ಹೂವರ್ ಕಿಡಿಕಾರಿದ್ದಾರೆ.
ಜೀವವೈವಿಧ್ಯತೆಯನ್ನು ಸಂರಕ್ಷಿಸುವ ಮೋದಿ ಅವರ ಮಾತು ನಿಜವಾಗಿದ್ದರೆ ಕೂಡಲೇ ಶಾಸಕ ನಿರಂಜನ್ ಕುಮಾರ್ ಅವರ ‘ರಸ್ತೆ ವಿಭಜಕ’ ಅಳವಡಿಸುವ ಮನವಿಯನ್ನು ತಿರಸ್ಕರಿಸಬೇಕು ಅವರು ಒತ್ತಾಯಿಸಿದ್ದಾರೆ. ಶ್ರಮಿಕ ರೈತರ ಹಿತ ಕಾಪಾಡಲು ಶಾಸಕರಾಗಲಿ ಅಥವಾ ಸರ್ಕಾರವಾಗಲಿ ಉತ್ಸುಕವಾಗಿದ್ದರೆ ಎಂಎಸ್‌ಪಿ ಹೆಚ್ಚಿಸಬೇಕು. ನಮ್ಮ ರೈತರ ಹೆಸರಿನಲ್ಲಿ ರಾಜಕೀಯ ಮಾಡಬೇಡಿ ಎಂದು ಹೂವರ್ ಹೇಳಿದ್ದಾರೆ.
ಓದಿ : ಧಾರ್ಮಿಕ ಕ್ಷೇತ್ರ ಮುನ್ನೆಲೆಗೆ ಬರುವ ಸಂದರ್ಭದಲ್ಲಿ ವಿವಾದ ಸಹಜ : ವಿನಯ್ ಗುರೂಜಿ