ಚಾಮರಾಜನಗರ: ಬಂಡೀಪುರ ಹುಲಿ ಸಂರಕ್ಷಿತ ಪ್ರದೇಶದ, ಗೋಪಾಲಸ್ವಾಮಿ ಬೆಟ್ಟ ವಲಯದ ಮಾದಪ್ಪನ ಬೆಟ್ಟ ಕಡು ಅರಣ್ಯ ಪ್ರದೇಶದಲ್ಲಿ ಹೆಣ್ಣಾನೆ ಶವವೊಂದು ಪತ್ತೆಯಾಗಿದ್ದು, ಲಿಶ್ಮೇನಿಯಾ ಸೋಂಕಿನಿಂದ ಸಾವನ್ನಪ್ಪಿರಬಹುದು ಎಂದು ಶಂಕಿಸಲಾಗಿದೆ.
ಮೃತ ಆನೆಗೆ 30-40 ವರ್ಷ ಆಗಿರಬಹುದು ಎಂದು ಅಂದಾಜಿಸಲಾಗಿದ್ದು, ಆನೆಯ ಮರಣೋತ್ತರ ಪರೀಕ್ಷೆ ವೇಳೆ ಅದರ ಹೊಟ್ಟೆಯಲ್ಲಿ ಲಿಶ್ಮೇನಿಯಾ ಸೋಂಕು ಪತ್ತೆಯಾಗಿದೆ ಎಂದು ಅರಣ್ಯ ಇಲಾಖೆ ತಿಳಿಸಿದೆ.
ಆನೆಯ ನಾಲಿಗೆಯಲ್ಲಿ ರಕ್ತಸ್ರಾವವಾಗಿದ್ದು ಮತ್ತು ದೇಹದ ಹಲವೆಡೆ ಊತ ಕಾಣಿಸಿಕೊಂಡಿದೆ. ಹಾಗಾಗಿ, ಆನೆಯ ಅಂಗಾಂಗವನ್ನು ವನ್ಯಜೀವಿ ಪ್ರಯೋಗಾಲಯಕ್ಕೆ ಕಳುಹಿಸಲಾಗಿದೆ.