ಕೊಳ್ಳೇಗಾಲ(ಚಾಮರಾಜನಗರ): ಬ್ಲ್ಯಾಕ್ ಫಂಗಸ್ ದೇಶದಲ್ಲಿ ಹೊಸದಲ್ಲ. ಆದರೆ ಇತ್ತೀಚೆಗೆ ಅದು ಹೆಚ್ಚಾಗುತ್ತಿದೆ ಎಂದು ಶಿಕ್ಷಣ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಎಸ್.ಸುರೇಶ್ ಕುಮಾರ್ ಹೇಳಿದರು.
ಕೊಳ್ಳೇಗಾಲದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಚಾಮರಾಜನಗರ ಜಿಲ್ಲೆಯಲ್ಲಿ ಬ್ಲ್ಯಾಕ್ ಫಂಗಸ್ ಕಾಣಿಸಿಕೊಂಡಿಲ್ಲ. ಬ್ಲ್ಯಾಕ್ ಫಂಗಸ್ಗೆ ಸ್ಟೀರಾಯ್ಡ್ನ ಚಿಕಿತ್ಸೆ ಕೊಡುತ್ತಾರೆ ಮತ್ತು ಶುಗರ್ ಪೇಶೆಂಟ್ಗಳಿಗೆ ಇದು ಬರಲಿದೆ ಎಂದು ವೈದ್ಯರು ಹೇಳಿದ್ದಾರೆ. ಅದಕ್ಕೂ ಯಾವ ರೀತಿಯಲ್ಲಿ ಚಿಕಿತ್ಸೆ ಕೊಡುವ ಬಗ್ಗೆ ತಿಳಿಯಲಾಗುತ್ತಿದೆ ಎಂದು ತಿಳಿಸಿದರು.
ಸ್ಯಾಚುರೇಷನ್ ಕಡಿಮೆಯಾಗಿ ಕೊನೆ ಹಂತದಲ್ಲಿ ಆಸ್ಪತ್ರೆಗಳಿಗೆ ಬರುವವರ ಸಂಖ್ಯೆಯನ್ನು ಕಡಿಮೆ ಮಾಡಲು ಕ್ರಮವಹಿಸಬೇಕು. ಸೂಕ್ತ ಸಮಯಕ್ಕೆ ಆಸ್ಪತ್ರೆಗೆ ಜನರು ಚಿಕಿತ್ಸೆಗಾಗಿ ಬರಬೇಕು. ನಿರ್ಲಕ್ಷ್ಯ ವಹಿಸಬಾರದು. 40-50 ಸ್ಯಾಚುರೇಷನ್ ಇಟ್ಟುಕೊಂಡು ಕಡಿಮೆ ಇರುವಾಗ ಜನರು ಆಸ್ಪತ್ರೆಗೆ ಬರುವುದು ಮಾಡಬೇಡಿ, ಹೀಗೆ ಆಗಬಾರದು ಎಂದರು.
ಈ ನಿಟ್ಟಿನಲ್ಲಿ ಕೊರೊನಾ ಲಕ್ಷಣ ಇರುವವರಿಗೆ ಆರ್ಟಿ-ಪಿಸಿಆರ್ ಮಾಡಿಸಲು ಆಸ್ಪತ್ರೆಗೆ ಕಳಿಸುವ ವ್ಯವಸ್ಥೆಯಾಗಬೇಕು. ನಾಳೆಯಿಂದ ಖಾಸಗಿ ಆಸ್ಪತ್ರೆ ಹಾಗೂ ನರ್ಸಿಂಗ್ ಹೋಂಗಳಲ್ಲಿ ರ್ಯಾಪಿಡ್ ಮತ್ತು ಆರ್ಟಿ-ಪಿಸಿಆರ್ ಮಾಡುವ ಚಿಂತನೆ ನಡೆಯುತ್ತಿದೆ. ಜಿಲ್ಲೆಯ ಎಲ್ಲರ ಜೀವಗಳು ಅಮೂಲ್ಯ ಯಾರನ್ನು ನಾವು ಕಳೆದುಕೊಳ್ಳಬಾರದು ಎಂದು ಹೇಳಿದರು.
ಹೋಂ ಐಸೋಲೇಷನ್ನಲ್ಲಿ ಸೂಕ್ತ ವ್ಯವಸ್ಥೆಯಿಲ್ಲದಿದ್ದರೆ ಸೋಂಕಿತರನ್ನು ಕೋವಿಡ್ ಕೇರ್ ಸೆಂಟರ್ಗೆ ವರ್ಗಾಯಿಸಲು ಆಶಾ ಕಾರ್ಯಕರ್ತೆಯರಿಗೆ ತಿಳಿಸಲಾಗಿದೆ ಎಂದ ಅವರು, ರಾಮಪುರದಲ್ಲಿ 30 ಬೆಡ್ ಸೌಲಭ್ಯವುಳ್ಳ ಕೊರೊನಾ ಆಸ್ಪತ್ರೆಯನ್ನು ತೆರೆಯಲು ಚಿಂತನೆ ನಡೆಸಲಾಗಿದೆ. ಮಲೆ ಮಹದೇಶ್ವರ ಬೆಟ್ಟದ ಕಾಡಂಚಿನ ಗ್ರಾಮಗಳು ಹಾಗೂ ಬೆಟ್ಟದ ಜನರ ಚಿಕಿತ್ಸೆಗೆ ಸೂಕ್ತ ಕ್ರಮ ತೆಗೆದುಕೊಳ್ಳುವ ಬಗ್ಗೆ ಪರಿಶೀಲನೆ ಮಾಡಲಾಗುವುದು ಎಂದು ಹೇಳಿದರು.
ಕೊರೊನಾ 3ನೇ ಅಲೆಯ ಬಗ್ಗೆ ಪ್ರತಿಕ್ರಿಯಿಸಿದ ಸಚಿವರು, 3ನೇ ಅಲೆಯ ಬಗ್ಗೆ ದೇವಿ ಶೆಟ್ಟಿ ಅವರ ನೇತೃತ್ವದಲ್ಲಿ ಸಮಿತಿ ರಚನೆಯಾಗಿದೆ. ಮುನ್ನೆಚ್ಚರಿಕೆ ಕ್ರಮ ತೆಗೆದುಕೊಳ್ಳುವ ಬಗ್ಗೆ ಅವರು ನಮಗೆ ಸಲಹೆ, ಸೂಚನೆ ಹಾಗೂ ಮಾರ್ಗದರ್ಶನ ನೀಡಲಿದ್ದಾರೆ ಎಂದು ಹೇಳಿದರು.