ಚಾಮರಾಜನಗರ: ಕರ್ನಾಟಕದ ಕಟ್ಟಕಡೆಯ ಗ್ರಾಮವಾದ ಹನೂರು ತಾಲೂಕಿನ ಗೋಪಿನಾಥಂ ಗ್ರಾಮಕ್ಕೆ ಇಂದು ಶಿಕ್ಷಣ ಸಚಿವ ಸುರೇಶ್ ಕುಮಾರ್ ಭೇಟಿ ನೀಡಿ ಗ್ರಾಮಕ್ಕೆ ರಸ್ತೆ, ಸಾರಿಗೆ ವ್ಯವಸ್ಥೆ, ಕುಡಿಯುವ ನೀರಿನ ಸಮಸ್ಯೆಗೆ ಪರಿಹಾರ ಕೊಡಿಸುವ ಭರವಸೆ ನೀಡಿದರು.
ಇಂದು ಶಿಕ್ಷಣ ಸಚಿವ ಸುರೇಶ್ ಕುಮಾರ್ ಗೋಪಿನಾಥಂ ಸರ್ಕಾರಿ ಶಾಲೆಯಲ್ಲಿ ವಾಸ್ತವ್ಯ ಹೂಡುವ ಮೊದಲು ಸಚಿವರು ಇಂದು ಮಾಡುವ ಮುನ್ನ ಮಕ್ಕಳು ಮತ್ತು ಪೋಷಕರ ಸಂವಾದದಲ್ಲಿ ಸಾಲು ಸಾಲು ಸಮಸ್ಯೆಗಳು ತೂರಿ ಬಂದವು.
ಶಾಲೆಯ ಎರಡು ಕೊಠಡಿಗಳಿಗೆ ವಿದ್ಯುತ್ ಇಲ್ಲದಿರುವುದು ಮತ್ತು ಶಾಲಾ ಕಟ್ಟಡದ ಮೇಲೆ ವಿದ್ಯುತ್ ತಂತಿ ಹಾದು ಹೋಗಿರುವ ಸಮಸ್ಯೆ ತಿಳಿದು ನಾಳೆ ಒಳಗಾಗಿ ವಿದ್ಯುತ್ ತಂತಿ ತೆರವುಗೊಳಿಸಲಾಗುವುದು. ಶಾಲಾ ಕೊಠಡಿಗೆ ವಿದ್ಯುತ್ ಕಲ್ಪಿಸಿ, ಖಾಸಗಿ ಸಹಭಾಗಿತ್ವದಲ್ಲಿ ಸುಸಜ್ಜಿತ ಪ್ರಯೋಗಾಲಯವನ್ನು ನಿರ್ಮಿಸಲಾಗುವುದು ಎಂದು ಭರವಸೆ ನೀಡಿದರು.
ಇಂಗ್ಲೀಷ್, ಹಿಂದಿ ಶಿಕ್ಷಕರನ್ನು ನೇಮಿಸುವ ಕುರಿತು ಚರ್ಚಿಸಲಿದ್ದು, ಕುಡಿಯುವ ನೀರಿನಲ್ಲಿ ಪ್ಲೋರೈಡ್ ಅಂಶವಿರುವ ಸಮಸ್ಯೆಗೆ ಕಿರುಯೋಜನೆಯನ್ನು ರೂಪಿಸಲಾಗುವುದು. ಜೊತೆಗೆ ಇಲ್ಲಿನ ವಿದ್ಯಾರ್ಥಿಗಳು 1ನೇ ತರಗತಿಯಿಂದ ಕನ್ನಡ ಮಾಧ್ಯಮ ಶಾಲೆ ಪ್ರಾರಂಭಿಸಬೇಕೆಂಬ ಬೇಡಿಕೆಯನ್ನು ಪ್ರಥಮ ಆದ್ಯತೆಗಾಗಿ ತೆಗೆದುಕೊಂಡು ಕನ್ನಡ ಮಾಧ್ಯಮ ಶಾಲೆ ಪ್ರಾರಂಭಿಸುವುದಾಗಿ ಘೋಷಿಸಿದರು.
ಸಾರಿಗೆ ದರ ಕಡಿತ, ಕೃಷಿ ಅದಾಲತ್, ಪಾಲಾರ್-ಹೊಗೆನಕಲ್ ಸಾರಿಗೆ ಬಸ್ ದರವನ್ನು 10 ದಿನದೊಳಗೆ ಕಡಿತಗೊಳ್ಳಲಿದ್ದು, ಕೃಷಿಗೆ ಸಂಬಂಧಿಸಿದ ಮಾಹಿತಿಗಳು, ಬೆಳೆ ವಿವರಗಳು ಗೋಪಿನಾಥಂ ಜನರಿಗೆ ತಲುಪದಿರುವುದರಿಂದ ಇನ್ನು 7 ದಿನದಲ್ಲಿ ಗೋಪಿನಾಥಂ ಹಳ್ಳಿಯಲ್ಲಿ ಕೃಷಿ ಅದಾಲತ್ ನಡೆಸಲಾಗುವುದು. ಗೋಪಿನಾಥಂನಲ್ಲಿ ಪಿಯು ಕಾಲೇಜು ತೆರೆಯಬೇಕೆಂಬ ಒತ್ತಾಯಕ್ಕೆ ಗೋಪಿನಾಥಂನಲ್ಲಿ ಕೌಶಲ್ಯಾಧಾರಿತ ಶಿಕ್ಷಣ ನೀಡಲು ಚಿಂತಿಸಲಾಗುವುದು ಎಂದು ತಿಳಿಸಿದರು.
ವನ್ಯಕುಲ ಕ್ಷತ್ರಿಯರು ಮತ್ತು ಪಡಿಯಚ್ಚು ಒಂದೇ ಎಂಬುದನ್ನು ಕೋರ್ಟ್ ಪುರಸ್ಕರಿಸಿದ್ದರೂ ಸಿಂಧುತ್ವ ಪ್ರಮಾಣ ಪತ್ರ ಸಿಗದಿರುವುದನ್ನು ಗ್ರಾಮದ ಯುವಕರು ಸಚಿವರ ಗಮನಕ್ಕೆ ತಂದರು. ಜಿಲ್ಲಾಡಳಿತ ಒಂದು ಮಟ್ಟದವರೆಗೆ ಈ ಸಮಸ್ಯೆಯನ್ನು ಪರಿಹರಿಸಲಿದೆ ಬಳಿಕ ಇದನ್ನು ಸರ್ಕಾರದ ಮಟ್ಟದಲ್ಲಿ ಸಮಸ್ಯೆ ಪರಿಹರಿಸುವ ಭರವಸೆ ನೀಡಿದರು.
ತಂದೆ ಇಲ್ಲದ ಮಗುವಿಗೆ ಆಧಾರ:
ಮಕ್ಕಳ ಸಂವಾದದಲ್ಲಿ ತಂದೆಯನ್ನು ಕಳೆದುಕೊಂಡ ಒಂದು ಮಗು ತನ್ನ ಓದಿಗೆ ಸಹಾಯ ಮಾಡಬೇಕೆಂದು ಅಳುತ್ತಾ ತಿಳಿಸಿದಾಗ ಸಚಿವರು ಆತನನ್ನು ಸಂತೈಸಿ ಉನ್ನತ ಶಿಕ್ಷಣದವರೆವಿಗೂ ಉತ್ತಮ ಹಾಸ್ಟೆಲ್ ವ್ಯವಸ್ಥೆ, ಕಾಲೇಜು ವ್ಯವಸ್ಥೆ ಮಾಡಲು ಜಿಲ್ಲಾಡಳಿತ ಕ್ರಮ ವಹಿಸಲಿದೆ ಎಂದು ತಿಳಿಸಿದರು.
ನವವಧುವಿನಂತೆ ಸಿಂಗಾರ:
ಶಿಕ್ಷಣ ಸಚಿವರ ವಾಸ್ತವ್ಯಕ್ಕೆ ಕಾಡಂಚಿನ ಗೋಪಿನಾಥಂ ಗ್ರಾಮ ನವವಧುವಿನಂತೆ ಸಿಂಗರಿಸಲಾಗಿತ್ತು. ಶಾಲಾ ಕಾರ್ಯಕ್ರಮಕ್ಕೂ ಮುನ್ನ ಅರಣ್ಯಾಧಿಕಾರಿ ನಿರ್ಮಿಸಿರುವ ಮಾರಿಯಮ್ಮ ದೇಗುಲಕ್ಕೆ ಭೇಟಿ ನೀಡಿ ಪೂಜೆ ಸಲ್ಲಿಸಿದರು. ಬಳಿಕ, ನೂರಾರು ಶಾಲಾ ಮಕ್ಕಳು ಪೂರ್ಣಕುಂಭ ಸ್ವಾಗತ ಹಾಗೂ ಗ್ರಾಮದ ಮಹಿಳೆಯರು ಆರತಿ ಎತ್ತಿ ಸಚಿವರನ್ನು ಅದ್ಧೂರಿಯಾಗಿ ಬರ ಮಾಡಿಕೊಂಡರು.
ಅನ್ನಸಾರು- ಹಾಸಿಗೆಯಲ್ಲಿ ನಿದ್ರೆ:
ಮೂವರು ಮಕ್ಕಳೊಂದಿಗೆ ಸರಳ ಭೋಜನ ಸವಿದ ಸಚಿವರು ಮೊಸರನ್ನ, ಹುಳಿಯಣ್ಣ, ಬರ್ಫಿಯನ್ನಷ್ಟೇ ಸವಿದರು. ಬಳಿಕ, ಆರ್ ಎಸ್ ಎಸ್ ಪ್ರಮುಖರಾದ ವೆಂಕಟೇಶ್, ಶ್ರೀನಿವಾಸ್ ಜೊತೆಗೆ ಮಲಗಿದರು.
ಕಾರ್ಯಕ್ರಮದಲ್ಲಿ ಡಿಸಿ ಬಿ.ಬಿ.ಕಾವೇರಿ, ಜಿಪಂ ಸಿಇಒ ಬಿ.ಎಸ್.ನಾರಾಯಣರಾವ್, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಎಚ್.ಡಿ.ಆನಂದಕುಮಾರ್ ಹಾಗೂ ಜಿಲ್ಲಾಮಟ್ಟದ ಅಧಿಕಾರಿಗಳಿದ್ದರು.